ರಾಜ್ಯ

ರಾಜ್ಯದಲ್ಲಿ ತಾಪಮಾನ ಹೆಚ್ಚಳ: ಜನರಲ್ಲಿ ಹೆಚ್ಚುತ್ತಿದೆ ಅಲರ್ಜಿ, ವಿಟಮಿನ್ ಡಿ ಕೊರತೆ ಸಮಸ್ಯೆ!

Manjula VN

ಬೆಂಗಳೂರು: ಮೈ ಮೇಲೆ ಬಿಸಿಲು ಬಿದ್ದರೆ, ರೋಗಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ. ಆದರೀಗ ಇತ್ತೀಚಿನ ದಿನಗಳಲ್ಲಿನ ಅತಿಯಾದ ತಾಪಮಾನ ಜನರಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರು ಮಾಡುತ್ತಿದ್ದು, ಇದು ಕಳವಳವನ್ನು ಸೃಷ್ಟಿಸಿದೆ.

ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಅಲರ್ಜಿ ಹಾಗೂ ವಿಟಮಿನ್ ಡಿ ಕೊರತೆ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯನ ಕಿರಣಗಳಿಗೆ 5-10 ನಿಮಿಷಗಳಿಗಿಂತ ಹೆಚ್ಚು ಒಡ್ಡಿಕೊಳ್ಳದಂತೆ, ಸನ್ ಸ್ಕ್ರೀನ್ ಗಳ ಬಳಸುವಂತೆ ಸಲಹೆ ನೀಡಲಾಗುತ್ತಿದೆ ಎಂದು ಚರ್ಮರೋಗ ತಜ್ಞ ವೈದ್ಯ ಡಾ.ಅನಘಾ ಸುಮಂತ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.95ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಳಿಗ್ಗೆ 8 ಗಂಟೆಗೂ ಮೊದಲು ಮಧ್ಯಾಹ್ನ 3.30ರಿಂದ 5 ಗಂಟೆಯ ನಡುವೆ ಬಿಸಿಲಿಗೆ ಮೈಯೊಡ್ಡುವಂತೆ ಸಲಹೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ತೀವ್ರವಾಗಿರುವುದಿಲ್ಲ ಎಂದು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಮೂಳೆ ತಜ್ಞ ಮತ್ತು ಪ್ರಾಧ್ಯಾಪಕ ಡಾ.ಅವಿನಾಶ್ ಸಿಕೆ ಅವರು ಹೇಳಿದ್ದಾರೆ.

ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಚರ್ಮದ ಸಮಸ್ಯೆ, ದದ್ದುಗಳು, ಕಿರಿಕಿರಿ, ಪಿಗ್ಮೆಂಟೇಶನ್ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಪ್ರತಿ 6 ತಿಂಗಳಿಗೊಮ್ಮೆ ನಿಯಮಿತವಾಗಿ ಚರ್ಮ ಹಾಗೂ ವಿಟಮಿನ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಸನ್ ಸ್ಕ್ರೀನ್ (SPF 30 ಮತ್ತು UV-A ಮತ್ತು UV-B ಕಿರಣಗಳಿಂದ ರಕ್ಷಿಸುವ ಸಾಮರ್ಥ್ಯ ಇರುವ ಕ್ರೀಮ್)ಗಳನ್ನು ಬಳಕೆ ಮಾಡಬೇಕು. ಇದು ಸನ್ ಬರ್ನ್ ಆಗದಂತೆ ನೋಡಿಕೊಳ್ಳಲಿದ್ದು, ಚರ್ಮಕ್ಕೆ ರಕ್ಷಣೆಯನ್ನೂ ನೀಡುತ್ತದೆ. ಚರ್ಮಕ್ಕಾಗುವ ಹಾನಿಯು ಕ್ಯಾನ್ಸರ್ ಗೂ ಕಾರಣವಾಗಲಿದೆ. ಹೀಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಬಿಸಿಲಿಗೆ ಒಡ್ಡಿಕೊಳ್ಳದಂತೆ ಸಲಹೆ ನೀಡಲಾಗುತ್ತಿದೆ ಎಂದು ಸ್ಪರ್ಶ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ ನಾರಾಯಣ ಸುಬ್ರಮಣ್ಯಂ ಹೇಳಿದ್ದಾರೆ.

SCROLL FOR NEXT