ರಾಜ್ಯ

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಮಂಡನೆ

Srinivas Rao BV

ಬೆಂಗಳೂರು: ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಇಂದು ವಿಧಾನಸಭೆಯಲ್ಲಿ ಮಂಡನೆಯಾಯಿತು.
 
2022 ರ ವಿಧೇಯಕಕ್ಕೆ ತಿದ್ದುಪಡಿ ಮಸೂದೆ ಇದಾಗಿದ್ದು, ವಾಣಿಜ್ಯ, ಕೈಗಾರಿಕೆ, ಉದ್ಯಮ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಹೋಟೆಲ್ ಗಳು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿಯೂ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ನಾಮಫಲಕಗಳ ಮೇಲ್ಭಾಗದಲ್ಲಿ ಕನ್ನಡವನ್ನು ಪ್ರದರ್ಶಿಸಬೇಕು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಕರ್ನಾಟಕ ಸಚಿವ ಸಂಪುಟ ಜನವರಿ 5 ರಂದು ಅನುಮೋದನೆ ನೀಡಿತ್ತು.

ಕನ್ನಡಕ್ಕೆ ಪ್ರಾಧಾನ್ಯತೆ ನೀಡುತ್ತಿಲ್ಲ ಎಂದು ಬೆಂಗಳೂರಿನ ಕೆಲವು ಉದ್ಯಮಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಕನ್ನಡ ಪರ ಸಂಘಟನೆಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮಾರ್ಗವನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿತ್ತು

ಆದಾಗ್ಯೂ, ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಕಳೆದ ತಿಂಗಳ ಕೊನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ಹಿಂದಿರುಗಿಸಿದ್ದು, ಉಭಯ ಸದನಗಳನ್ನು ಅಧಿವೇಶನಕ್ಕೆ ಕರೆಯುವ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿರುವುದರಿಂದ ಅದನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅನುಮೋದನೆಗಾಗಿ ಮಸೂದೆಯಾಗಿ ಮಂಡಿಸಲು ಸಲಹೆ ನೀಡಿದರು. ಸೋಮವಾರದಿಂದ ಆರಂಭವಾದ ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನ ಫೆಬ್ರವರಿ 23 ರಂದು ಮುಕ್ತಾಯಗೊಳ್ಳಲಿದೆ.

SCROLL FOR NEXT