ರಾಜ್ಯ

ಗೋಕಾಕ್, ಚಿಕ್ಕೋಡಿ ಹೊಸ ಜಿಲ್ಲೆಗಳು; ಫೆ.16ರಂದು ಸಿಎಂ ಸಿದ್ದರಾಮಯ್ಯ ಘೋಷಣೆ ಸಾಧ್ಯತೆ

Manjula VN

ಬೆಂಗಳೂರು: ರಾಜ್ಯದ ಅತಿದೊಡ್ಡ ಜಿಲೆಯ ಬೆಳಗಾವಿ ಭಾಗದ ವಿವಿಧ ಸಂಘಟನೆಗಳು ಮತ್ತು ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆ.16) ಬಜೆಟ್ ಮಂಡಿಸಲಿದ್ದು, ಈ ವೇಳೆ ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಎಲ್ಲ ವಿವರಗಳನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

ಚಿಕ್ಕೋಡಿ ಹಾಗೂ ಗೋಕಾಕ ತಾಲೂಕನ್ನು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕೆಂದು ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರು ಮೂರು ದಶಕಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆಡಳಿತಾತ್ಮಕ ಉದ್ದೇಶದಿಂದ ಬೈಲಹೊಂಗಲ ಮತ್ತು ಅಥಣಿ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸಬೇಕೆಂಬ ಒತ್ತಾಯವೂ ಇದೆ.

1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರು ಚಿಕ್ಕೋಡಿ ಮತ್ತು ಗೋಕಾಕವನ್ನು ಹೊಸ ಜಿಲ್ಲೆಗಳಾಗಿ ಘೋಷಿಸಲು ಬಹುತೇಕ ಅಧಿಸೂಚನೆಯನ್ನು ಹೊರಡಿಸಿದ್ದರು. ಆದರೆ, ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಪ್ರಾಬಲ್ಯವನ್ನು ತಡೆಯಲು ವಿವಿಧ ಕನ್ನಡ ಸಂಘಟನೆಗಳ ಒತ್ತಡದಿಂದಾಗಿ ಜಿಲ್ಲೆಯ ವಿಂಗಡಣೆ ಮಾಡಲಿಲ್ಲ.

“ಸರ್ಕಾರ ಆಡಳಿತ ಅನುಕೂಲಕ್ಕಾಗಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು. ಚಿಕ್ಕೋಡಿ ಮತ್ತು ಗೋಕಾಕ ತಾಲೂಕುಗಳನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಈ ಎರಡೂ ಪಟ್ಟಣಗಳು ಜಿಲ್ಲಾ ಕೇಂದ್ರವಾಗಲು ಅಗತ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹಿಂದಿವೆ” ಎಂದು ವಿವಿಧ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಚಿಕ್ಕೋಡಿ, ಗೋಕಾಕ ಭಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಕೂಡ ಈ ಎರಡು ತಾಲೂಕುಗಳನ್ನು ಹೊಸ ಜಿಲ್ಲೆಗಳನ್ನಾಗಿ ಘೋಷಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

SCROLL FOR NEXT