ಸಿಎಂ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ(ಸಂಗ್ರಹ ಚಿತ್ರ) 
ರಾಜ್ಯ

ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಕೇಂದ್ರದಲ್ಲಿರುವ ಸಚಿವರು, ಸಂಸದರು ಮೌನವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ ಅಸಮಾಧಾನ

Manjula VN

ಬೆಂಗಳೂರು: ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಕೇಂದ್ರದಲ್ಲಿರುವ ಸಚಿವರು, ಸಂಸದರು ಮೌನವಾಗಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ನಡೆದ ನಮ್ಮ ಹಕ್ಕುಗಳು ನಮ್ಮ ತೆರಿಗೆಗಳು ಕನ್ನಡಿಗರ ಅಭಿಯಾನದ ಕುರಿತ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿರುವ ಮುಖ್ಯಮಂತ್ರಿಗಳು, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಆಗಿದೆ. 14ನೇ ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಹಂಚಿಕೆ ಶೇ.4.71ಇದ್ದದ್ದು 15ನೇ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಕಡಿತ ಮಾಡಿಬಿಟ್ಟರು. ಅಂದರೆ ಶೇ.1.07 ನಮಗೆ ಕಡಿತ ಆಗಿ ಇದರಿಂದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 5 ವರ್ಷದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ರಾಜ್ಯಕ್ಕೆ 1,87000 ಕೋಟಿ ನಷ್ಟ ಆಗಿದೆ. ಅಂದರೆ ನಾವು ಕೊಡುವ ತೆರಿಗೆಯ 100 ರೂನಲ್ಲಿ ನಮಗೆ ವಾಪಾಸ್ ಬರೋದು ಕೇವಲ 12-13 ರೂ ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಫೆರಿಫೆರಲ್ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ದಿಗೆ 6000 ಕೋಟಿ ಸೇರಿ ಒಟ್ಟು 11495 ಕೋಟಿ ವಿಶೇಷ ಅನುದಾನ ಕೊಡಲು ಆಯೋಗ ಶಿಫಾರಸ್ಸು ಮಾಡಿತ್ತು. ಇದನ್ನು ಕೊಡಬಾರದು ಎಂದು ತೀರ್ಮಾನ ಮಾಡಿ ತಡೆದವರು ನಿರ್ಮಲಾ ಸೀತಾರಾಮನ್.

ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್, ರಾಜ್ಯಕ್ಕೆ ಇಷ್ಟು ದೊಡ್ಡ ಅನ್ಯಾಯ ಮಾಡಿಬಿಟ್ಟರು. ಸೆಸ್ ಮತ್ತು ಸರ್ ಚಾರ್ಜ್ ನಿಂದ ಸಂಗ್ರಹ ಆಗಿದ್ದ ತೆರಿಗೆರಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ರಾಜ್ಯಗಳಿಗೆ ಕೊಡುವುದಿಲ್ಲ. ಆದ್ದರಿಂದ ಇದರಲ್ಲೂ ನಾವು ರಾಜ್ಯಗಳು ಪಾಲು ಕೇಳಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದು ನಾನು ಒತ್ತಾಯಿಸುತ್ತೇನೆ. ಇದಕ್ಕೇ ನಾನು ಹೇಳೋದು, "ನನ್ನ ತೆರಿಗೆ ನನ್ನ ಹಕ್ಕು" ಎಂದು ನಾನು ಹೇಳೋದು ಎಂದು ಹೇಳಿದರು.

ರಾಜ್ಯಗಳ ಅಭಿವೃದ್ಧಿಗೆ ಸೆಸ್, ಸರ್ ಚಾರ್ಜ್ ನಲ್ಲಿ ಪಾಲು ಕೊಡಲೇಬೇಕು. ರಾಜ್ಯಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ರಾಜ್ಯಗಳು ದುರ್ಬಲ ಆದ್ರೆ ದೇಶ ದುರ್ಬಲ ಆಗ್ತದೆ. ರಾಜ್ಯಗಳು ಸುಭದ್ರ ಆಗಿದ್ದರೆ ದೇಶವೂ ಸುಭದ್ರ ಆಗ್ತದೆ. ದೇಶ ಅಂದರೆ ರಾಜ್ಯಗಳ ಒಕ್ಕೂಟ. ತೆರಿಗೆ ವಸೂಲಾಗೋದೇ ರಾಜ್ಯಗಳಿಂದ. ಹೀಗಿದ್ದಾಗ ರಾಜ್ಯಗಳಿಗೆ ನ್ಯಾಯಯುತವಾದ ತೆರಿಗೆ ಕೊಡಿ ಎನ್ನುವುದು ನಮ್ಮ ಒತ್ತಾಯ ಎಂದು ತಿಳಿಸಿದರು.

ಅಭಿವೃದ್ಧಿಯನ್ನೇ ಮಾಡದ ಉತ್ತರ ಪ್ರದೇಶಕ್ಕೆ 2,18,000 ಕೋಟಿಗೂ ಅಧಿಕ ಹಣ ಹೋಗುತ್ತಿದೆ. ನಮಗೆ 52,000 ಕೋಟಿ ಮಾತ್ರ ಕೊಡುತ್ತಿದ್ದಾರೆ. ಇದನ್ನು ಸಹಿಸಬೇಕಾ? ಆದರೆ, ಉತ್ತರ ಪ್ರದೇಶದ ಜನಸಂಖ್ಯೆ ಹೆಚ್ಚಾಗಿದ್ದರೂ ಅವರಿಂದ ಬರುವ ತೆರಿಗೆ ಕಡಿಮೆ. ಉತ್ತರ ಪ್ರದೇಶಕ್ಕೆ ಕೊಡಬೇಡಿ ಎನ್ನುವುದು ನಮ್ಮ ವಾದವಲ್ಲ. ನಮಗೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹವಾಗಿದೆ.

ಕೇಂದ್ರದಲ್ಲಿರುವ ರಾಜ್ಯದ ಸಚಿವರು ಹಾಗೂ ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ಹೀಗಾಗಿ ಒಕ್ಕೂಟ ವ್ಯವಸ್ಥೆ ಬಲಪಡಿಸಲು ನಿರಂತರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

SCROLL FOR NEXT