ವಿಧಾನಸಭೆ.
ವಿಧಾನಸಭೆ. 
ರಾಜ್ಯ

ಮಂಗಳೂರು ಜೆರೋಸಾ ಶಾಲೆ ವಿವಾದ: ಸದನದಲ್ಲಿ ಗದ್ದಲ, ಬಿಜೆಪಿ ಶಾಸಕನ ವಿರುದ್ಧದ ಎಫ್‌ಐಆರ್‌ಗೆ ವಿರೋಧ

Manjula VN

ಬೆಂಗಳೂರು: ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ದೇವರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿಚಾರವಾಗಿ ನಡೆದ ವಿವಾದ ಸದನದಲ್ಲೂ ಗುರುವಾರ ತೀವ್ರ ಚರ್ಚೆಗೆ ಗ್ರಾಸವಾಯಿತು.

ಘಟನೆಗೆ ಸಂಬಂಧಿಸಿದಂತೆ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸದನದಲ್ಲಿ ಈ ವಿಚಾರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಘಟನೆಯ ಬಗ್ಗೆ ವಿವರಣೆ ನೀಡಿದರು. ಘಟನಾ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡ ಪರಮೇಶ್ವರ್ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಘಟನೆ ನಡೆದಾಗ ಭರತ್ ಶೆಟ್ಟಿ ಶಾಲೆಯ ಆವರಣದಲ್ಲಿ ಇರಲಿಲ್ಲ. ತನಿಖೆ ಮಾಡುತ್ತೇವೆ. ಡಿಡಿಪಿಐ ಕಚೇರಿಗೆ ಹೋಗಿ ಹಿಂದೂ ಮಕ್ಕಳನ್ನು ಕ್ರೈಸ್ತ ಶಾಲೆಗೆ ಸೇರಿಸಬೇಡಿ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದೆ ಇದ್ದರೂ ಅವರ ವಿರುದ್ಧ ಎಫ್ಐಆರ್ ಮಾಡಿದ್ದು ಏಕೆ? ಹಾಗೆ ಎಫ್ಐಆರ್ ದಾಖಲು ಮಾಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು.

ಶಾಲಾ ಮಕ್ಕಳ ಮುಂದೆ ಪ್ರಧಾನಿ ಬಗ್ಗೆ ಮಾತನಾಡಲು‌ ಅವರು ಯಾರು? ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೂ ಏಕೆ ಎಫ್ಐಆರ್ ಮಾಡಿಲ್ಲ? ಎಂದು‌ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪೋಲಿಸರು ತಮ್ಮ ಕರ್ತವ್ಯದಲ್ಲಿ ತಾರಮತ್ಯ ಮಾಡಿದ್ದಾರೆ. ಶಿಕ್ಷಕರ ಮೇಲೆ ದೂರು ಬಂದಾಗ ಎಫ್ ಐ ಆರ್ ಮಾಡಿಲ್ಲ. ತಪ್ಪನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಎಫ್ ಐ ಆರ್ ಮಾಡಲಾಗಿದೆ. ಪೋಷಕರು ಕೊಟ್ಟ ದೂರು ಎಫ್ ಐ ಆರ್ ಆಗಬೇಕು. ಶಾಸಕರ ವಿರುದ್ಧ ಎಫ್ ಐ ಆರ್ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಹಿಂದೂ ಸಮಾಜದ ಅವಹೇಳನ ಮಾಡಿದ ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಬರುತ್ತದೆ ಎಂದರು.

ಸದನದಲ್ಲಿ ಗೃಹ ಸಚಿವರು ಸದನದಲ್ಲಿ ಶಾಸಕ ಭರತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆಯನ್ನು ಓದಿ ಹೇಳಿದರು. ಈ ವೇಳೆ ತಮ್ಮ ಹೇಳಿಕೆಯನ್ನು ಭರತ್ ಶೆಟ್ಟಿ ಸಮರ್ಥನೆ ಮಾಡಿಕೊಂಡರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

ಈ ವೇಳೆ ಗೃಹ ಸಚಿವ ಡಾ.‌ಜಿ ಪರಮೇಶ್ವರ್ ಕೂಡಾ ಗರಂ ಆಗಿ ಬಿಜೆಪಿ ಸದಸ್ಯರ ವಿರುದ್ಧ ಏರು ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಚಿವರಾದ ಪ್ರಿಯಾಂಕ್ ‌ಖರ್ಗೆ ಹಾಗೂ ದಿನೇಶ್ ಗುಂಡೂರಾವ್ ಧ್ವನಿಗೂಡಿಸಿದರು. ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನಲೆಯಲ್ಲಿ ಸದನವನ್ನು ಮುಂದೂಡಲಾಯಿತು.

SCROLL FOR NEXT