ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ 
ರಾಜ್ಯ

ಧೈರ್ಯವಾಗಿ ಪ್ರಶ್ನಿಸಿ ಎಂದಿದ್ದರಲ್ಲಿ ತಪ್ಪಿಲ್ಲ: ಕುವೆಂಪು ಬರಹ ಬದಲಿಕೆಗೆ ಸರ್ಕಾರ ಸಮರ್ಥನೆ

Manjula VN

ಬೆಂಗಳೂರು: ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಸರ್ಕಾರ ಈ ಬಗ್ಗೆ ಸಮರ್ಥನೆ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಾಮಾಜಿಕ ಸ್ಥಿತಿಗಳ ತಕ್ಕಂತೆ ಬದಲಾವಣೆ ಆಗಬೇಕು. ಧೈರ್ಯವಾಗಿ ಪ್ರಶ್ನಿಸಿ ಎಂದಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕುತೂಹಲ ಇಲ್ಲ ಅಂದರೆ ಕಲಿಕೆ ಬರಲ್ಲ. ಕಲಿಕೆಯೇ ಬರಲಿಲ್ಲ ಎಂದರೆ ಜ್ಞಾನ ಬರಲ್ಲ. ಸಮಾಜದಲ್ಲಿ ಪ್ರಬುದ್ಧತೆ ಇರಲ್ಲ. ಪ್ರಬುದ್ಧ ಭಾರತ, ಪ್ರಬುದ್ಧ ಸಮಾಜ ಕಟ್ಟಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದು ಬೆಳೆಯಬೇಕು ಎಂದರೆ ಪ್ರಶ್ನೆ ಮಾಡಲೇಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಅದಕ್ಕೆ ಪ್ರಶ್ನೆ ಕೇಳುವುದು ಮುಖ್ಯ. ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಪ್ರಶ್ನೆ ಮಾಡಿದರೆ ವೈಜ್ಞಾನಿಕ ಮನೋಭಾವ ಬೆಳೆಯುತ್ತೆ. ಶಿಕ್ಷಕರಿಗೆ ಹೊಸ ರೂಪದಲ್ಲಿ ಕಲಿಕೆ ಆಗುತ್ತದೆ ಎಂದು ಹೇಳಿದರು.

ಇದೇ ವೇಳೆ ಹಿಂದೂ ಪರ ಸಂಘಟನೆಗಳು ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವೇನು ಬೇರೆ ವಿಚಾರ ಹೇಳಿಲ್ಲ. ಜ್ಞಾನಕ್ಕೆ ನಾವು ತಲೆಬಾಗಲೇಬೇಕು. ಗ್ರಂಥಾಲಯಗಳಿಗೆ ಅರಿವು ಕೇಂದ್ರ ಎಂದು ಬದಲಾವಣೆ ಮಾಡಿದ್ದೇವೆ. ಅರಿವೇ ಗುರು ಎಂದು ಬಸವಣ್ಣ ಹೇಳಿದ್ದಾರೆ. ಇದು ತಪ್ಪಾ?. ಅರಿವು ಮೂಡಿಸಲು ಏನು ಮಾಡಬೇಕು ಅದನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ನಾಲೆಡ್ಜ್ ಬೇಸ್ ಸೊಸೈಟಿ ಕ್ರಿಯೆಟ್ ಮಾಡುತ್ತಿದ್ದೇವೆ. ವಿಶ್ವಗುರು ಆಗಬೇಕು ಎಂದರೆ, ಜ್ಞಾನಕ್ಕೆ ಅಗ್ರಸ್ಥಾನ ನೀಡಬೇಕು. ಹಾಸ್ಟೆಲ್ ಗಳು ಎಲ್ಲ ವಸತಿ ಶಾಲೆಗಳು ಜ್ಞಾನ ಕೇಂದ್ರವಾಗಬೇಕು. ಆಗ ಪ್ರಬುದ್ಧ ಮತ್ತು ಸಮೃದ್ಧ ಭಾರತ ಕಟ್ಟಬಹುದು ಎಂದರು,

ಏನಿದು ವಿವಾದ?

ರಾಜ್ಯದ ಹಲವು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬರಹವನ್ನು ಮತ್ತೆ ಬದಲಾವಣೆ ಮಾಡಲಾಗುತ್ತಿದೆ.

SCROLL FOR NEXT