ಬೆಳಗಾವಿ: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಬಳಿ ಶುಕ್ರವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ನಾಯಕ್(8), ಗೋಪಾಲ್ ನಾಯಕ್(45) ಹಾಗೂ ಧಾರವಾಡ ಮೂಲದ ಅನ್ನಪೂರ್ಣಾ ಶಿರೋಳ(53) ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇಂದು ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.