ಕಾನೂನು ಸಚಿವ ಎಚ್.ಕೆ. ಪಾಟೀಲ್
ಕಾನೂನು ಸಚಿವ ಎಚ್.ಕೆ. ಪಾಟೀಲ್ 
ರಾಜ್ಯ

ಗಡಿ ವಿವಾದದ ಕ್ಯಾತೆ: ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ ಕರ್ನಾಟಕ!

Nagaraja AB

ಬೆಂಗಳೂರು: ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ನೆರೆಯ ಮಹಾರಾಷ್ಟ್ರಕ್ಕೆ ಕರ್ನಾಟಕ ಶುಕ್ರವಾರ ಎಚ್ಚರಿಕೆ ನೀಡಿದೆ. ನಾವು ದೇಶದಲ್ಲಿನ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದೇವೆ. ನಮ್ಮ ಅನುಮತಿ ಇಲ್ಲದೆ ಗಡಿಯೊಳಗೆ ಯಾವುದೇ ಚಟುವಟಿಕೆ ಕೈಗೊಳ್ಳಲು ಮಹಾರಾಷ್ಟ್ರ ಯತ್ನಿಸಿದರೆ, ಕಾನೂನು ಮತ್ತು ಸಂವಿಧಾನಕ್ಕೆ ಅಗೌರವ ತೋರಿಸುವಂತಹದ್ದಾಗಿದ್ದು, ಅಂತಹ ಚಟುವಟಿಕೆಗಳನ್ನು ಕರ್ನಾಟಕ ಸಹಿಸುವುದಿಲ್ಲ ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ್ ವಿಧಾನಪರಿಷತ್ತಿನಲ್ಲಿ ಶುಕ್ರವಾರ ಹೇಳಿದರು.

ಗಡಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣಕ್ಕೆ ಬರುವುದಿಲ್ಲ ಎಂದು ಯಾವಾಗಲೂ ಕರ್ನಾಟಕ ಸ್ಪಷ್ಟಪಡಿಸುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವವರು ಚುನಾವಣೆ ಬಂದಾಗಲೆಲ್ಲಾ ಆ ರೀತಿ ನಡೆದುಕೊಳ್ಳುತ್ತಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಿಕೆ ಅಥವಾ ಮಹಾಜನ್ ವರದಿಯೇ ಅಂತಿಮ. ಅವರು ಸುಪ್ರೀಂ ಕೋರ್ಟ್‌ಗೆ ಹೋದರೆ ನಾವು ಸುಮ್ಮನೆ ಕೂರುವುದಿಲ್ಲ. ಅವರು ಇಂತಹ ಅನಗತ್ಯ ರಾಜಕೀಯವನ್ನು ನಿಲ್ಲಿಸಬೇಕು, ಆದರೆ ಅವರು ಹಾಗೆ ಮುಂದುವರಿಸಿದರೆ ನಾವು ಸೂಕ್ತವಾದ ಉತ್ತರ ನೀಡುತ್ತೇವೆ. ಅವರು ತಡೆದುಕೊಳ್ಳಲು ಆಗುವುದಿಲ್ಲ ಎಂದರು.

ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ನೋಡಬೇಕು. ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರ ಪಡೆದಿದ್ದಾರೆ. ಕರ್ನಾಟಕ ನಡೆದುಕೊಳ್ಳುವ ರೀತಿಯಲ್ಲಿ ಮಹಾರಾಷ್ಟ್ರ ನಡೆದುಕೊಂಡು ಗಡಿ ಪ್ರದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬೇಕು ಎಂದು ಸಚಿವರು ಹೇಳಿದರು.

ಇದಕ್ಕೂ ಮುನ್ನಾ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ ಎಂಇಎಸ್ ನಿಯೋಗವು ಕರ್ನಾಟಕದ ಗಡಿ ಪ್ರದೇಶಗಳಲ್ಲಿ ವಾಸಿಸುವ ಮರಾಠಿ ಭಾಷಿಕ ಜನರ ಬೇಡಿಕೆಗಳ ಕುರಿತು ಚರ್ಚಿಸಿದ್ದಾರೆ.ಅಲ್ಲದೇ 865 ಗಡಿ ಗ್ರಾಮಗಳ ಜನರಿಗೆ ಎಲ್ಲಾ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆರೋಗ್ಯ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದ್ದು, ಅವರಿಗೆ ಸಹಾಯ ಮಾಡಲು ತಹಶೀಲ್ದಾರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿದೆ ಎಂದು ತಿಳಿಸಿದರು.

SCROLL FOR NEXT