ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಬಂಡಿಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಭೀತಿ: ಕೇಂದ್ರದ ನೀತಿಯಿಂದ ಅಗ್ನಿಶಾಮಕ ವಾಹನಗಳ ಕೊರತೆ, ಬೆಂಕಿ ಹತ್ತಿಕೊಂಡರೆ ದೇವರೇ ಗತಿ!

Manjula VN

ಮೈಸೂರು: ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಬೇಸಿಗೆ ಬರುತ್ತಿದ್ದಂತೆಯೇ ಕಾಡ್ಗಿಚ್ಚಿನ ಭೀತಿ ಶುರುವಾಗುತ್ತದೆ. ಆದರೆ, ಅಗ್ನಿ ಅನಾಹುತಗಳನ್ನು ತಡೆಯಬೇಕಾದ ಅಧಿಕಾರಿಗಳು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದ್ದು, ಕಾಡ್ಗಿಚ್ಚು ಹತ್ತಿಕೊಂಡರೆ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಅಗ್ನಿ ಅನಾಹುತಗಳನ್ನು ತಡೆಯಲು ಅಧಿಕಾರಿಗಳಿಗೆ ಅಗ್ನಿಶಾಮಕ ವಾಹನಗಳ ಕೊರತೆ ಎದುರಾಗಿದೆ. ಈ ಸಮಸ್ಯೆಗೆ ಕೇಂದ್ರದ ನೀತಿಗಳು ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.

ಬೇಸಿಗೆ ಬರುತ್ತಿದ್ದಂತೆ ಈ ಪ್ರದೇಶಗಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಈ ಸಂದರ್ಭದಲ್ಲಿ ಅರಣ್ಯ ರಕ್ಷಣೆಗಾಗಿ ಅಗ್ನಿಶಾಮಕ ಇಲಾಖೆಯು ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿಬ್ಬಂದಿಗಳ ಜೊತೆಗೆ 37 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸುತ್ತದೆ. ಆದರೆ ಈ ವರ್ಷ ವಾಹನಗಳ ಕೊರತೆ ಎದುರಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳ ನೋಂದಣಿ ರದ್ದುಪಡಿಸಬೇಕೆಂಬ ನಿಯಮ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಳೆಯ ವಾಹನಗಳು ಸುಸ್ಥಿತಿಯಲ್ಲಿದ್ದರೂ ಆರ್‌ಟಿಒಗಳಿಂದ ಫಿಟ್‌ನೆಸ್ ಪ್ರಮಾಣಪತ್ರ ಸಿಗುತ್ತಿಲ್ಲ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ ಅಗ್ನಿಶಾಮಕ ಠಾಣೆಗಳು ಪ್ರತಿ ಅಗ್ನಿಶಾಮಕ ಠಾಣೆಗೆ ಕೇವಲ ಒಂದು ವಾಹನ ಮಾತ್ರ ನೀಡುತ್ತವೆ. ನಿಯಮದಿಂದ ಅಗ್ನಿಶಾಮಕ ವಾಹನಗಳಿಗೆ ವಿನಾಯಿತಿ ನೀಡುವಂತೆ ಕೋರಿ ಕೇಂದ್ರಕ್ಕೆ ಸರ್ಕಾರ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಕಾಡ್ಗಿಚ್ಚಿನ ಭೀತಿ ಶುರುವಾಗಿದೆ. ಆತಂಕದ ನಡುವೆಯೂ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೂರು ಜಿಲ್ಲೆಗಳ 45 ಅಗ್ನಿಶಾಮಕ ವಾಹನಗಳಿಗೆ 15 ವರ್ಷಗಳು ಕಳೆದಿವೆ. ವಾಹನಗಳು ಉತ್ತಮ ಸ್ಥಿತಿಯಲ್ಲಿಯೇ ಇವೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಬಳಸಲು ಅವಕಾಶ ಸಿಗುತ್ತಿಲ್ಲ. ರಕ್ಷಣೆ, ಆಂತರಿಕ ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಂತಹ ವಿಶೇಷ ಉದ್ದೇಶಗಳಿಗಾಗಿ ಬಳಸುವ ವಾಹನಗಳಿಗೆ ಕೇಂದ್ರ ಸರ್ಕಾರವು ತನ್ನ ನೀತಿಯಿಂದ ವಿನಾಯಿತಿ ನೀಡಿದೆ. ಹೀಗಾಗಿ ಅಗ್ನಿಶಾಮಕ ವಾಹನಗಳಿಗೂ ಕೂಡ ವಿನಾಯಿತಿ ನೀಡಬೇಕೆಂಬುದು ನಮ್ಮ ಮನವಿಯಾಗಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದರೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿದಿನ ಮೈಸೂರು ವಿಭಾಗವೊಂದರಲ್ಲೇ ಸುಮಾರು 15 ಅಗ್ನಿಶಾಮಕ ಕರೆಗಳು ಬರುತ್ತಿವೆ. ವಾಹನಗಳ ಕೊರತೆಯಿಂದ ವಿಭಾಗೀಯ ಅಧಿಕಾರಿಗಳು ಪ್ರತಿ ಸ್ಥಳಕ್ಕೆ ಕೇವಲ ಒಂದು ವಾಹನವನ್ನು ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಬಂದೋಬಸ್ತ್, ವಾರ್ಷಿಕ ಜಾತ್ರೆಗಳು ಮತ್ತು ಉತ್ಸವಗಳು ಮತ್ತು ವಿಐಪಿ ಕಾರ್ಯಕ್ರಮಗಳಿಗೆ ಇಲಾಖೆಯು ಅಗ್ನಿಶಾಮಕ ವಾಹನಗಳನ್ನು ಕಳುಹಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿರುತ್ತದೆ ಎಂದು ಹೇಳಿದ್ದಾರೆ.

ಈ ಸಮಸ್ಯೆಗಳ ನಡುವೆಯೂ ಅಗ್ನಿಶಾಮಕ ಅಧಿಕಾರಿಗಳು ಕಾಡ್ಗಿಚ್ಚನ್ನು ನಿಭಾಯಿಸಲು ಅರಣ್ಯಾಧಿಕಾರಿಗಳಿಗೆ ಸಹಾಯ ಮಾಡಲು ಕ್ರಮಗಳನ್ನು ಕೈಗೊಂಡಿದ್ದಾರೆ.

ಇತ್ತೀಚೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಅವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಅಂಚಿನಲ್ಲಿ ವಾಸಿಸುವ ಗ್ರಾಮಸ್ಥರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ಕುರಿತು ತರಬೇತಿ ನೀಡುವ ಕೆಲಸ ಮಾಡಿದರು.

ತುರ್ತು ಸಂದರ್ಭದಲ್ಲಿ ತುರ್ತು ಸಂದರ್ಭಗಳಲ್ಲಿ ಕಾಡ್ಗಿಚ್ಚು ನಿಭಾಯಿಸಲು ಗ್ರಾಮಸ್ಥರಿಗೆ ತರಬೇತಿ ನೀಡುತ್ತಿದ್ದೇವೆಂದು ಗುರುರಾಜ್ ಅವರು ತಿಳಿಸಿದ್ದಾರೆ.

SCROLL FOR NEXT