ಹ್ಯಾಕರ್ ಶ್ರೀಕಿ
ಹ್ಯಾಕರ್ ಶ್ರೀಕಿ 
ರಾಜ್ಯ

ಬಿಟ್ ಕಾಯಿನ್ ಪ್ರಕರಣ: ಪೊಲೀಸರು ಉಚಿತ ಪಾಸ್ ನೀಡಿದ್ದರು: ಆರೋಪಿ ಶ್ರೀಕಿ-ಪೊಲೀಸರ ನಂಟು ಇಮೇಲ್ ನಿಂದ ಬಹಿರಂಗ!

Manjula VN

ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದದ್ದು ನನ್ನ ಜೀವನದ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ನನಗೆ ಪೋಲೀಸರು ಉಚಿತ ಪಾಸ್ ನೀಡಿದ್ದರು. ಎಲ್ಲಾ ಉನ್ನತ ಪೊಲೀಸರಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದೆ. ಅವರು ನನಗೆ ಲ್ಯಾಪ್ ಟಾಪ್, ಮ್ಯೂಸಿಕ್, ಝಾಝ್-ಟ್ಯಾಬ್ ಸೇರಿ ನನಗೆ ಬೇಕಿದ್ದನನ್ನೆಲ್ಲಾ ನೀಡಿದ್ದರು. ಸ್ವತಃ ಪೊಲೀಸ್ ಆಯುಕ್ತರೇ ನನ್ನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ....

ಇದು ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ತನ್ನ ಗರ್ಲ್ ಫ್ರೆಂಡ್'ಗೆ 2021ರ ಫೆಬ್ರವರಿ 21 ರಂದು ರವಾನಿಸಿರುವ ಇ ಮೇಲ್...

ಈ ಇಮೇಲ್ ಪೊಲೀಸರು ಆರೋಪಿ ಶ್ರೀಕಿ ಜೊತೆಗೆ ಯಾವ ರೀತಿಯ ನಂಟ ಹೊಂದಿದ್ದರು ಎಂಬುದನ್ನು ಬಹಿರಂಗ ಪಡಿಸುತ್ತಿದೆ.

ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೇಲ್ ಅನ್ನು ವಶಪಡಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಶ್ರೀಕಿ ನಡುವಿನ ನಂಟನ್ನು ಸಾಬೀತುಪಡಿಸಲು ಎಸ್‌ಐಟಿ ಮೇಲ್ ಅನ್ನು ಬಳಕೆ ಮಾಡುತ್ತಿದೆ.

ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಅವರು ಆರೋಪಿ ಶ್ರೀಕಿಯೊಂದಿಗೆ ನಂಟು ಹೊಂದಿದ್ದಾರೆಂದು ಹೇಳಲಾಗುತ್ತಿದ್ದು, ಬಾಬು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲು ಮತ್ತು ಕ್ರಿಪ್ಟೋ ವ್ಯಾಲೆಟ್‌ಗಳು, ವೆಬ್‌ಸೈಟ್‌ಗಳು, ಗೇಮಿಂಗ್ ಅಪ್ಲಿಕೇಶನ್‌ಗಳು ಇತ್ಯಾದಿಗಳನ್ನು ಹ್ಯಾಕ್ ಮಾಡಲು ಶ್ರೀಕಿ ಮತ್ತು ಇನ್ನೊಬ್ಬ ಆರೋಪಿ ರಾಬಿನ್ ಖಂಡೇಲ್‌ವಾಲ್ ಅನ್ನು ಹೇಗೆ ಬಳಸಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಲು ಎಸ್‌ಐಟಿ ಇಮೇಲ್ ಅನ್ನು ಆಧಾರವಾಗಿ ಬಳಕೆ ಮಾಡಿಕೊಳ್ಳುತ್ತಿದೆ.

ಈ ಇಮೇಲ್ ಬಹಿರಂಗಗೊಂಡಿರುವುದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಬಾಬು ಪರ ವಕೀಲರು ವಾದ ಮಂಡಿಸಿದ್ದು, ದೂರಿನಲ್ಲಿ ನೀಡಲಾಗಿರುವ ದಿನಾಂಕದಂದು ಶ್ರೀಕಿ ಪೊಲೀಸ್ ವಶದಲ್ಲಿಯೇ ಇರಲಿಲ್ಲ ಎಂದು ಹೇಳಿದ್ದಾರೆ.

ತನಿಖೆಯನ್ನು ಸುಗಮಗೊಳಿಸುವ ಸಲುವಾಗಿ ಬಾಬು ಅವರು ಶ್ರೀಕಿ ಮತ್ತು ರಾಬಿನ್ ಅವರನ್ನು ಸಾಫ್ಟ್‌ವೇರ್ ಸಂಸ್ಥೆಯಾದ ಜಿಸಿಐಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಕರೆದೊಯ್ದಿದ್ದರು ಎಂದು ವಾದಿಸಿದ್ದಾರೆ,

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎನ್ ಜಗದೀಶ್ ಅವರು, ಬಾಬು ಅವರು ತನಿಖೆಗಾಗಿ ಜಿಸಿಐಡಿಗೆ ಹೋಗಿರಲಿಲ್ಲ. ತನಿಖಾ ತಂಡವು ಸಿಐಡಿ ಅಥವಾ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಸಂಪರ್ಕಿಸಬಹುದಿತ್ತು, ಇದನ್ನು ಹೈಕೋರ್ಟ್ ಆದೇಶದಲ್ಲಿ ಒತ್ತಾಯಿಸಿದೆ ಎಂದು ವಾದಿಸಿದರು.

SCROLL FOR NEXT