ಸಂಗ್ರಹ ಚಿತ್ರ 
ರಾಜ್ಯ

ಅಪರಿಚಿತ ಮೂಲಗಳಿಂದ 9 ಕೋಟಿ ರೂ. ಸಂಗ್ರಹ, ಪಿಎಫ್‌ಐನಿಂದ ಯುವಕರಿಗೆ ಭಯೋತ್ಪಾದನಾ ಚಟುವಟಿಕೆ ತರಬೇತಿ: ಕೋರ್ಟ್ ಗೆ NIA

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಂಘಟನೆ ಅಪರಿಚಿತ ಮೂಲಗಳಿಂದ 9 ಕೋಟಿ ರೂ ಹಣ ಸಂಗ್ರಹ ಮಾಡಿದ್ದು, ಯುವಕರಿಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಕೋರ್ಟ್ ಗೆ ಮಾಹಿತಿ ನೀಡಿದೆ.

ಬೆಂಗಳೂರು: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಂಘಟನೆ ಅಪರಿಚಿತ ಮೂಲಗಳಿಂದ 9 ಕೋಟಿ ರೂ ಹಣ ಸಂಗ್ರಹ ಮಾಡಿದ್ದು, ಯುವಕರಿಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಕೋರ್ಟ್ ಗೆ ಮಾಹಿತಿ ನೀಡಿದೆ.

ಪಿಎಫ್ಐನ ಆರೋಪಿ ಪದಾಧಿಕಾರಿಗಳು ಮತ್ತು ಸದಸ್ಯರು 2011 ಮತ್ತು 2022ರ ನಡುವೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತನ್ನ ಕಾರ್ಯಕರ್ತರಿಗೆ ತರಬೇತಿ ನೀಡಲು ಅಪರಿಚಿತ ಮೂಲಗಳಿಂದ 9.10 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ. ಆ ಪೈಕಿ ತಲಾ 50,000 ರೂ.ಗಳ ಸಣ್ಣ ಕಂತುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ನಗದು ಮೂಲಕ ಠೇವಣಿ ಮಾಡಲಾಗಿದೆ ಮತ್ತು ಈ ವ್ಯವಹಾರಗಳ ಮೇಲೆ ಯಾವುದೇ ಲೆಕ್ಕಪರಿಶೋಧನೆ ನಡೆದಿಲ್ಲ ಎಂದು ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನಗರದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಏಳು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಎನ್‌ಐಎ ಅಧಿಕಾರಿಗಳು ಆರೋಪಿಗಳು ವಿವಿಧ ಸಂಚು ಸಭೆಗಳನ್ನು ನಡೆಸಿದ್ದರು, ಯುವಕರನ್ನು ಭಯೋತ್ಪಾದಕ ಕೃತ್ಯಗಳಿಗೆ ನೇಮಿಸಿಕೊಂಡಿದ್ದರು, ಇದಕ್ಕಾಗಿ ಅಪಾರ ಪ್ರಮಾಣದ ನಿಧಿ ಸಂಗ್ರಹಿಸಿದರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿ ಫ್ರೀಡಂ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ತರಬೇತಿ ನೀಡಿದ್ದರು ಎಂದು ಹೇಳಿದೆ.

ಅಷ್ಟು ಮಾತ್ರವಲ್ಲದೇ ಹಿಂದೂ ನಾಯಕರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಪಿಎಫ್‌ಐ ಅನ್ನು ಬಲಪಡಿಸಲು ಸಭೆಗಳು ನಡೆದಿವೆ. ಇಸ್ಲಾಮಿಕ್ ಆಡಳಿತಗಾರರು ಹೇಗೆ ಆಳುತ್ತಿದ್ದರೋ ಹಾಗೆಯೇ 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ಗಣರಾಜ್ಯವನ್ನಾಗಿ ಮಾಡಲು PFI ಉದ್ದೇಶಿಸಿತ್ತು. RSS ಮತ್ತು ಹಿಂದೂ ನಾಯಕರು ಅವರ ಶತ್ರುಗಳು ಮತ್ತು ದೇಶವು ಸ್ವಾತಂತ್ರ್ಯದ ನಂತರ ಹಿಂದೂಗಳ ಆಳ್ವಿಕೆಯಲ್ಲಿದೆ ಎಂದು ಸದಸ್ಯರಿಗೆ ತಿಳಿಸುತ್ತಿದ್ದರು. ಹಿಂದೂ ಪರವಾಗಿರುವ ಸರ್ಕಾರಗಳು ಮುಸ್ಲಿಮರಿಗೆ ಅಡ್ಡಿಪಡಿಸಲು ಸಿಎಎ, ಎನ್‌ಆರ್‌ಸಿಯಂತಹ ಕಾನೂನುಗಳನ್ನು ತಂದವು ಎಂದು ಹೇಳಿ ಯುವಕರ ದಾರಿತಪ್ಪಿಸುತ್ತಿದ್ದರು. ಆರೆಸ್ಸೆಸ್ ಮತ್ತು ಸಂಘಪರಿವಾರದ ಪ್ರಮುಖ ಶತ್ರುಗಳು ಎಂದು ತೋರಿಸಲು ಮಿತ್ತೂರಿನಲ್ಲಿ ಯುವಕರಿಗೆ ಎರಡು-ಮೂರು ತಿಂಗಳ ಪೂರ್ವಭಾವಿ ಅಧಿವೇಶನವನ್ನು ನಡೆಸಲಾಯಿತು. ನಂತರ ಯೋಗಾಭ್ಯಾಸ ನಡೆಸುವ ನೆಪದಲ್ಲಿ ಮಚ್ಚು, ಖಡ್ಗಗಳನ್ನು ಪ್ರಯೋಗಿಸುವ ತರಬೇತಿ ನೀಡಲಾಯಿತು ಎಂದು ಎನ್‌ಐಎ ಸಲ್ಲಿಸಿದ ಸಂರಕ್ಷಿತ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಹೇಳಿಕೆಗಳು ತಿಳಿಸಿವೆ.

ಪಿಎಫ್‌ಐ ಮುಖಂಡರು ಮತ್ತು ಸದಸ್ಯರ ಮೇಲೆ ಹಲ್ಲೆ ನಡೆದರೆ ಹಿಂದೂ ಮುಖಂಡರನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಂತೆ ಶರೀಫ್ ಕೊಡಾಜೆ ಮತ್ತು ಅಬ್ದುಲ್ ಖಾದರ್ ಪುತ್ತೂರು ಭಾಗವಹಿಸಿದ್ದವರಿಗೆ ತಿಳಿಸಿದ್ದರು. ತರಬೇತಿ ಪಡೆದ ಯುವಕರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು. PFI ಸೇವೆ/ವಿಶೇಷ ತಂಡ ಮತ್ತು ಅಂಗರಕ್ಷಕ ತಂಡ. ಇದು ದೈಹಿಕವಾಗಿ ಸುಸಜ್ಜಿತ ಯುವಕರನ್ನು ಸೇವಾ ತಂಡಕ್ಕೆ ಆಯ್ಕೆ ಮಾಡಲಾಯಿತು ಮತ್ತು ಅವರಿಗೆ ಕೇರಳದ ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ವಿಶೇಷ ತರಬೇತಿ ನೀಡಲಾಯಿತು. ಪಿಎಫ್‌ಐ ಮುಖಂಡರನ್ನು ಬೆಂಗಾವಲು ಮಾಡಲು ಅಂಗರಕ್ಷಕ ತಂಡವನ್ನು ಬಳಸಲಾಯಿತು. ಸೇವಾ ತಂಡದೊಳಗಿನ ಒಂದು ವಿಭಾಗವು ಹಿಂದೂ ಕಾರ್ಯಕರ್ತರನ್ನು ಪತ್ತೆಹಚ್ಚುವ ಕಾರ್ಯವನ್ನು ವಹಿಸಿದೆ ಎಂದು ಆರೋಪಿಸಲಾಗಿದೆ. ಅಂತಹ ಕಾರ್ಯಕರ್ತರ ಕಾರ್ಯಕ್ರಮಗಳ ಛಾಯಾಚಿತ್ರ ಮತ್ತು ವಿಡಿಯೋಗ್ರಾಫ್ ಮಾಡಿ ಸೇವಾ ತಂಡದ ಮುಖ್ಯಸ್ಥ ಮಹಮ್ಮದ್ ಶರೀಫ್ ಕೊಡಾಜೆ ಮತ್ತು ಅಯೂಬ್ ಅಗ್ನಾಡಿ ಅವರಿಗೆ ಕಳುಹಿಸಲು ಸೂಚಿಸಲಾಗಿತ್ತು ಎಂದು ಹೇಳಿದೆ.

ಸೇವಾ ತಂಡದ ಸದಸ್ಯರಿಗೆ ಮನೆ ಮತ್ತು ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಮತ್ತು ಪಿಎಫ್‌ಐ ನಾಯಕರು ಕರೆ ನೀಡಿದಾಗಲೆಲ್ಲಾ ದೇಶದ ವಿರುದ್ಧ ದಂಗೆ ಏಳುವಂತೆ ಸೂಚಿಸಲಾಗಿತು. ತರಬೇತಿಗೆ ಬರುವ ಯುವಕರನ್ನು ಅಬ್ದುಲ್ ಖಾದರ್ ಪುತ್ತೂರು ನೋಡಿಕೊಳ್ಳುತ್ತಿದ್ದು, ತರಬೇತಿಗೆ ಬೇಕಾದ ಚಾಕು, ಕಬ್ಬಿಣದ ಸರಳು, ಕತ್ತಿಗಳನ್ನು ಕೊಡಾಜೆ ಮತ್ತು ಬಜ್ಪೆಯವರು ಪೂರೈಸುತ್ತಿದ್ದರು ಎನ್ನಲಾಗಿದೆ. ಸಂಚಿನ ಭಾಗವಾಗಿ ಶಿವಾಜಿನಗರದ ರುದ್ರೇಶ್, ಶಿವಮೊಗ್ಗದ ಹರ್ಷ, ಪ್ರವೀಣ್ ನೆಟ್ಟಾರು, ಮಂಗಳೂರಿನ ಪ್ರಶಾಂತ್ ಪೂಜಾರಿ, ಮೈಸೂರಿನ ರಾಜು ಸೇರಿದಂತೆ ಇತರರನ್ನು ಹತ್ಯೆ ಮಾಡಲಾಗಿದ್ದು, ಚಾಮರಾಜಪೇಟೆ, ಕೆ.ಜಿ.ಹಳ್ಳಿ-ಡಿಜೆಹಳ್ಳಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಗಲಭೆ ಸೃಷ್ಟಿಸಲಾಗಿದೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿದೆ.

ಪಿಎಫ್‌ಐ ರಾಜ್ಯಾಧ್ಯಕ್ಷ ನಾಸೀರ್ ಪಾಷಾ, ಪ್ರಧಾನ ಕಾರ್ಯದರ್ಶಿ ಅಯೂಬ್ ಕೆ ಅಗ್ನಾಡಿ, ಕಾರ್ಯದರ್ಶಿ ಪಿ ಅಬ್ದುಲ್ ಖಾದರ್, ಪಿಎಫ್‌ಐ ಸಮಿತಿ ಸದಸ್ಯ ಎ ಕೆ ಅಶ್ರಫ್, ಪಿಎಫ್‌ಐ ದಾವಣಗೆರೆ ಜಿಲ್ಲಾಧ್ಯಕ್ಷ ಶಾಹಿದ್ ಖಾನ್, ಶೇಖ್ ಎಜಾಜ್ ಅಲಿ, ಮೊಹಮ್ಮದ್ ತಪ್ಸೀರ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 43 ಡಿ (5) ಅಡಿಯಲ್ಲಿ ಜಾಮೀನು ನೀಡಲು ನಿರ್ಬಂಧವಿದೆ ಎಂದು ನ್ಯಾಯಾಧೀಶ ಗಂಗಾಧರ ಸಿ.ಎಂ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT