ಬೆಂಗಳೂರು: ಹುಬ್ಬಳ್ಳಿ ಗಲಭೆ ಆರೋಪಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಮತ್ತು ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರ ''ನಾನು ಕರಸೇವಕ, ನನ್ನನ್ನೂ ಬಂಧಿಸಿ" ಪ್ರತಿಭಟನೆ ತೀವ್ರವಾಗಿದೆ.
ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಗಮನ ಸೆಳೆಯಲು ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿಸಿದ ವಿಧಾನಸಭೆ ವಿರೋಧ ಪಕ್ಷ ನಾಯಕ ಆರೋ ಅಶೋಕ್, ಕರಸೇವಕ ಶ್ರೀಕಾಂತ್ ಪೂಜಾರಿ ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂದು ಹಸಿ ಸುಳ್ಳು ಹೇಳಿದಿರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಆ ಪ್ರಭು ಶ್ರೀರಾಮನು ನಿಮ್ಮನ್ನ ಎಂದಿಗೂ ಕ್ಷಮಿಸಲಾರ ಎಂದಿದ್ದಾರೆ. ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ಸಂಸದ ಪಿ ಸಿ ಮೋಹನ್ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: "ಬಿಜೆಪಿಗರೆಲ್ಲ “ನನ್ನನ್ನೂ ಬಂಧಿಸಿ“ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ?"
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಲ್ಲೇಶ್ವರ ಪೊಲೀಸ್ ಠಾಣೆ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ಶ್ರೀಕಾಂತ್ ಅವರ ಮೇಲೆ ಇದ್ದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಈಗಾಗಲೇ ತಾರ್ಕಿಕ ಅಂತ್ಯಕಂಡಿವೆ. ಬಾಕಿ ಇರುವ ಒಂದು ಪ್ರಕರಣ ಸಹ 1992ರಲ್ಲಿ ಅವರು ನಾಪತ್ತೆಯಾಗಿದ್ದರು ಎಂಬ ಕಾರಣಕ್ಕೆ ದಾಖಲಾಗಿತ್ತು.
ಈಗ ಉಳಿದಿರುವುದು ಎರಡು ಸಾಧ್ಯತೆಗಳು ಮಾತ್ರ.
1. ಒಂದು ತಮಗೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈತಪ್ಪಿ, ಕಾಣದ ಕೈಗಳು ತಮ್ಮನ್ನು ದಿಕ್ಕು ತಪ್ಪಿಸುತ್ತಿವೆ.
2. ಇಲ್ಲವಾದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಿದ್ದೀರಿ ಎಂದಿದ್ದಾರೆ.