ರಾಜ್ಯ

ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ಗವಿ ಗಂಗಾಧರೇಶ್ವರ ದೇಗುಲದಲ್ಲಿ ಕೌತುಕಕ್ಕೆ ಕ್ಷಣಗಣನೆ

Manjula VN

ಬೆಂಗಳೂರು: ನಾಡಿನಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ದೇವಾಲಯ ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ.

ಗವಿಗಂಗಾಧರ ದೇವಸ್ಥಾನದ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದ್ದು, ಈ ವಿಶೇಷ ಕೌತುಕಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸೂರ್ಯ ದಕ್ಷಿಣಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಸೂರ್ಯ ಕಿರಣವು ಶಿವ ಲಿಂಗವನ್ನು ಸ್ಪರ್ಶಿಸಲಿದೆ. ಹೀಗಾಗಿ ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬೆಳ್ಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿದೆ. ಗಂಗಾಧರನಿಗೆ ಪಂಚಾಭೀಷೇಕ, ಪುಷ್ಪಾಭಿಷೇಕ, ಮಹಮಂಗಳಾರತಿ‌ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ವಿಶೇಷ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲಿರುವ ಭಕ್ತರು ಕಾತರದಿಂದ ಇದ್ದು, ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುವ ನಿರೀಕ್ಷೆ ಇದೆ. ಹಬ್ಬದ ಹಿನ್ನೆಲೆ ಮುಂಜಾನೆಯಿಂದಲೇ ದೇಗುಲಕ್ಕೆ ಭಕ್ತಸಾಗರ ಹರಿದುಬರುತ್ತಿದೆ.

ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಗವಿ ಗಂಗಾಧರೇಶ್ವರ ಲಿಂಗ ಸ್ಪರ್ಶಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರುತ್ತದೆ ಎಂಬುದನ್ನು ನೋಡಿಕೊಂಡು ಅದರ ಆಧಾರದಲ್ಲಿ ನಂತರ ಭವಿಷ್ಯ ಹೇಳಲಾಗುತ್ತದೆ.

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಆರಂಭವಾಗಿದ್ದು, ಮುಂಜಾನೆಯಿಂದಲೇ ಭಕ್ತರ ದಂಡು ಹರಿದುಬರುತ್ತಿದೆ. ಸರಧಿ ಸಾಲಿನಲ್ಲಿ‌ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

ಭಕ್ತರು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿದೆ. ದೇವರನ್ನು ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಅರ್ಚಕರನ್ನು ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ.

SCROLL FOR NEXT