ರಾಜ್ಯ

ಕಿದ್ವಾಯಿಯಲ್ಲಿ ಹೊಸ ವ್ಯವಸ್ಥೆ: ಮೊದಲ ಭೇಟಿಯಲ್ಲೇ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಸೌಲಭ್ಯ ಲಭ್ಯ!

Srinivas Rao BV

ಬೆಂಗಳೂರು: ಕ್ಯಾನ್ಸರ್ ಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಉತ್ತಮಗೊಳಿಸಲು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (KMIO) ಯ ಹೊರ ರೋಗಿ ವಿಭಾಗದ (ಒಪಿಡಿ)ಯಲ್ಲಿ ರೋಗಿಗಳ ನೋಂದಣಿಗೆ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.

ಈ ಹೊಸ ವ್ಯವಸ್ಥೆಯಿಂದ ಕಾನ್ಸರ್ ರೋಗಿಗಳು ಕಾಯುವುದು ಕಡಿಮೆಯಾಗಲಿದ್ದು,  ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲಿದೆ. 

ಸಾಮಾನ್ಯವಾಗಿ, ಸರಿಯಾದ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಗಾಗಿ ಯೋಜನೆ ಸೇರಿದಂತೆ ಕ್ಯಾನ್ಸರ್ ರೋಗಿಗೆ ಸಂಬಂಧಿಸಿದ ವ್ಯವಸ್ಥೆ ಮಾಡಲು ಮೂರು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಹೊಸ ವ್ಯವಸ್ಥೆ ಒಂದೇ ದಿನದಲ್ಲಿ ಇದನ್ನೆಲ್ಲ ಮುಗಿಸುವ ಗುರಿ ಹೊಂದಿದೆ.

"ಪ್ರತಿದಿನ, ಸುಮಾರು 100 ರೋಗಿಗಳು ಬರುತ್ತಾರೆ. ಹೊಸ ವ್ಯವಸ್ಥೆಯಡಿ, ಆಸ್ಪತ್ರೆಗೆ ಭೇಟಿ ನೀಡುವ ಯಾವುದೇ ಕ್ಯಾನ್ಸರ್ ರೋಗಿಯನ್ನು ಒರಗಿಕೊಳ್ಳುವ ಕುರ್ಚಿಯಲ್ಲಿ ಕೂರಿಸಲಾಗುತ್ತದೆ. ಎಲ್ಲಾ ವರ್ಕ್ ಅಪ್ ಪ್ರಕ್ರಿಯೆಗಳನ್ನು ಅಲ್ಲಿಯೇ ನಡೆಸಲಾಗುವುದು. ನೋಂದಣಿ ತಂಡವು ರೋಗಿಗಳನ್ನು ಸಂಪರ್ಕಿಸಿ, ಅವರು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಂತಹ ಸರ್ಕಾರಿ ಯೋಜನೆಗಳಿಗೆ ಅರ್ಹರಾಗಿದ್ದಾರೆಯೇ ಎಂದು ಪರಿಶೀಲಿಸಿ ಮತ್ತು ಅವರ ಹೆಸರನ್ನು ನೋಂದಾಯಿಸುತ್ತಾರೆ. ಇದು 20 ನಿಮಿಷಗಳಲ್ಲಿ ನಡೆಯಲಿದೆ ಎಂದು ಕೆಎಂಐಒ ನಿರ್ದೇಶಕ ಡಾ ವಿ ಲೋಕೇಶ್ ಹೇಳಿದ್ದಾರೆ.

"ನಮ್ಮ ಸಿಬ್ಬಂದಿ ನಂತರ ರೋಗಿಯ ಫೈಲ್ ಅನ್ನು ಸಿದ್ಧಪಡಿಸುತ್ತಾರೆ ಮತ್ತು ಎಲ್ಲಾ ನಗದು ರಹಿತ ಬಿಲ್ಲಿಂಗ್ ಪ್ರಕ್ರಿಯೆಗಳನ್ನು ಸ್ಥಳದಲ್ಲಿಯೇ ಪೂರ್ಣಗೊಳಿಸಲಾಗುತ್ತದೆ. ನೋಂದಣಿ ಪೂರ್ಣಗೊಂಡ ನಂತರ, ನಮ್ಮ ಶುಶ್ರೂಷಾ ತಂಡವು ರೋಗಿಯ ಪ್ರಮುಖ ಲಕ್ಷಣಗಳನ್ನು ಗುರುತಿಸಿ ಮೌಲ್ಯಮಾಪನ ಮಾಡುತ್ತದೆ ಮತ್ತು ಬೇಸ್‌ಲೈನ್ ದಾಖಲೆಯನ್ನು ಮಾಡಲಾಗುತ್ತದೆ, ಇದು ಚಿಕಿತ್ಸೆಯ ಉದ್ದಕ್ಕೂ ರೋಗಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ನಿರ್ಣಾಯಕವಾಗಿದೆ” ಎಂದು ಡಾ ಲೋಕೇಶ್ ಹೇಳಿದ್ದಾರೆ.

“ನಂತರ, ರೋಗಿಯ ರಕ್ತದ ಮಾದರಿಗಳನ್ನು ಮೂಲಭೂತ ಮತ್ತು ಆಂಕೊಲಾಜಿಕಲ್ ಪರೀಕ್ಷೆಗಳಿಗೆ ಕಳುಹಿಸಲಾಗುತ್ತದೆ ಮತ್ತು ಎರಡು ಗಂಟೆಗಳ ಒಳಗೆ ವರದಿಗಳು ಸಿಗಲಿವೆ. ವೈದ್ಯರು ರೋಗಿಯನ್ನು ರೆಕ್ಲೈನರ್‌ನಲ್ಲಿ ಭೇಟಿ ಮಾಡುತ್ತಾರೆ. ಅವರು ಕಾಣಿಸುವ ಯಾವುದೇ ಗೆಡ್ಡೆಯನ್ನು ಪರಿಶೀಲಿಸಿ ಬಯಾಪ್ಸಿ ತೆಗೆದುಕೊಳ್ಳಬಹುದಾ ಎಂಬ ಬಗ್ಗೆ ಎರಡು ಗಂಟೆಗಳಲ್ಲಿ ಫಲಿತಾಂಶವನ್ನು ತಿಳಿಸುತ್ತಾರೆ.

ವರದಿಗಳ ಆಧಾರದ ಮೇಲೆ, ಕೇಸ್ ಹಿಸ್ಟರಿ ಸಿದ್ಧಪಡಿಸಲಾಗುತ್ತದೆ ಮತ್ತು ಕ್ಯಾನ್ಸರ್ ನ 'ಸ್ಟೇಜಿಂಗ್' ಮಾಡಲಾಗುತ್ತದೆ. ಅಗತ್ಯವಿದ್ದರೆ, ವೈದ್ಯರು ತಕ್ಷಣ ತಜ್ಞರೊಂದಿಗೆ ಮಾತನಾಡಿ ಚಿಕಿತ್ಸೆ ನೀಡಬೇಕೆಂದು ನಿರ್ಧರಿಸುತ್ತಾರೆ,'' ಎಂದು ಹೇಳಿದರು. ಈ ಹಂತವನ್ನು ತಲುಪಲು, ಈಗ ರೋಗಿಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಕಳೆಯಬೇಕಾಗಿದೆ ಎಂದು ಅವರು ಹೇಳಿದರು. ಹೊಸ ವ್ಯವಸ್ಥೆಯು ಈ ವಿಳಂಬವನ್ನು ನಿವಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

SCROLL FOR NEXT