ಗದಗ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಲೋಕಕಲ್ಯಾಣಕ್ಕೆ ದಿನಗಣನೆ ಶುರುವಾಗಿದ್ದು, ಮಂದಿರ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಹವಾ ಜೋರಾಗಿದೆ.
ಕಳೆದ 2 ತಿಂಗಳುಗಳಿಂದ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಗಜೇಂದ್ರಗಡ ಮೂಲಕ ಶಿಲ್ಪಿ ಮುತ್ತಣ್ಣ ಅವರು ಮೂರು ದಿನಗಳ ಹಿಂದಷ್ಟೇ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಈ ವೇಳೆ ಮುತ್ತಣ್ಣ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಅದ್ಧೂರಿ ಸ್ವಾಗತ ಕೋರಿದ್ದು, ಸನ್ಮಾನ ಮಾಡುತ್ತಿವೆ.
ಮುತ್ತಣ್ಣ ಅವರು ಈ ಭಾಗದ ಪ್ರಸಿದ್ಧ ಶಿಲ್ಪಿಯಾಗಿದ್ದು, ಕಳೆದ 10 ವರ್ಷಗಳಿಂದ ವಿಗ್ರಹಗಳ ರಚನೆಯಲ್ಲಿ ತೊಡಗಿದ್ದಾರೆ. ಮುತ್ತಣ್ಣ ಅವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅಯೋಧ್ಯೆ ರಾಮಮಂದಿರದ ಅಧಿಕಾರಿಗಳು ಆಹ್ವಾನ ನೀಡಿದ್ದರು. ಆಹ್ವಾನದ ಮೇರೆಗೆ ಅಯೋಧ್ಯೆಗೆ ತೆರಳಿದ್ದ ಮುತ್ತಣ್ಣ ಅವರು 60 ದಿನಗಳ ಕಾಲ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮತ್ತೊಬ್ಬ ಕನ್ನಡಿಗನ ಅಳಿಲು ಸೇವೆ: ಕೆಕ್ಕಾರ ಹುಡುಗ ಕೆತ್ತಿದ ಗಣೇಶನ ಶಿಲ್ಪಕ್ಕೆ ದೇವಾಲಯದಲ್ಲಿ ಸ್ಥಾನ!
ದೇವಾಲಯದ ಅಧಿಕಾರಿಗಳು ಎರಡು ಬ್ಯಾಚ್ ಗಳಲ್ಲಿ ರಾಜ್ಯದ ಪರಿಣಿತ ಶಿಲ್ಪಿಗಳಿಗೆ ಆಹ್ವಾನ ನೀಡಿದ್ದರು. ನಾವು ಮೊದಲ ಬ್ಯಾಚ್ ನಲ್ಲಿ ಹೋಗಿದ್ದೆವು ಎಂದು ಮುತ್ತಣ್ಣ ಅವರು ಹೇಳಿದ್ದಾರೆ.
ಮುತ್ತಣ್ಣ ಅವರು ಚದುರಂಗ ಎಂಬ ಕಂಬ ಹಾಗೂ ಮೇಲ್ಭಾಗದ ಗೋಡೆಯ ಕೆತ್ತನೆಗಳ ಮೇಲೆ ಹಂಸ ಪಕ್ಷಿಯ ಕೆತ್ತನೆ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಇದೊಂದು ಅದ್ಭುತ ಅನುಭವವಾಗಿದ್ದು, ದೇಶದಲ್ಲಿಯೇ ವಿಶಿಷ್ಟವಾದ ದೇವಾಲಯವಾಗಿದೆ. ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ನನ್ನ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ. ''ದೇವಸ್ಥಾನದ ಅಧಿಕಾರಿಗಳು ನನ್ನ ಸಹೋದರ ಚೆನ್ನು ಅವರನ್ನು ಎರಡು ತಿಂಗಳ ನಂತರ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಹ್ವಾನ ನೀಡಿದ್ದಾರೆ. ಈ ವಾರ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾನ ಸಮಾರಂಭ ನಡೆಯುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಮುತ್ತಣ್ಣ ಅವರು ತಿಳಿಸಿದ್ದಾರೆ.