ರಾಜ್ಯ

ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ

Manjula VN

ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆ ವೇಳೆ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸಂಸದ ಡಾ.ಉಮೇಶ ಜಾಧವ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯವರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಜೆಪಿಯ ಹಿರಿಯ ನಾಯಕರೊಂದಿಗೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಈ ಮಾತುಕತೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಡಾ.ಉಮೇಶ್ ಜಾಧವ್ ಅವರು, ನನ್ನ ಕ್ಷೇತ್ರದಲ್ಲಿ ನಡೆದಿರುವ ಕಾರ್ಯವನ್ನು ಮೋದಿಯವರು ಶ್ಲಾಘಿಸಿದರು. ಅಲ್ಲದೆ, ಕ್ಷೇತ್ರದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುವಂತೆ ಮತ್ತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ, ತಮ್ಮನ್ನು ಸ್ವಾಗತಿಸಲು ಸಂಪುಟದ ಸಚಿವರನ್ನು ಕಳುಹಿಸಿದ ಕಳುಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುವಂತೆ ತಿಳಿಸಿದರು ಎಂದು ಹೇಳಿದರು.

ಇದೇ ವೇಳೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಾಗತಿಸಲು ಬಾರದೇ ಇರುವುದರಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಅವರು ಕಲಬುರಗಿಗೆ ಬಂದಿದ್ದರೂ ಉಸ್ತುವಾರಿ ಸಚಿವರಾಗಿ ಅದರಲ್ಲೂ ಮಿನಿಮಮ್ ಪ್ರೋಟೋಕಾಲ್ ಆದರೂ ಸಚಿವ ಖರ್ಗೆ ಪಾಲನೆ‌ ಮಾಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದರು.

ಪ್ರಿಯಾಂಕ್ ಖರ್ಗೆ ಈ ಮೂಲಕ ಎರಡನೇ ಬಾರಿಗೆ ಪ್ರೋಟೋಕಾಲ್ ಪಾಲನೆ ಮಾಡುತ್ತಿಲ್ಲ. ಆದರೆ ಸರ್ಕಾರದ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪಿಎಂ ಅವರನ್ನು ಸ್ವಾಗತ ಕೋರಲು ಬಂದಿದ್ದರು. ಅವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಶುಭ ಕೋರಿದ್ದಾರೆ ಎಂದು ತಿಳಿಸಿದರು.

SCROLL FOR NEXT