ರಾಜ್ಯ

ಸಾವಯವ ಕೃಷಿ ಮಾಡುತ್ತಿರುವ 29 ಗ್ರಾಮಗಳ ರೈತರಿಗೆ ವೇದಾಂತ ಫೌಂಡೇಶನ್ ನಿಂದ ಸನ್ಮಾನ

Lingaraj Badiger

ಬೆಳಗಾವಿ: ಬರ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ, ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಕರು ಮತ್ತು ಸಮಾಜ ಸೇವಕರು ಸೇರಿ ರಚಿಸಿರುವ ಬೆಳಗಾವಿಯ ವೇದಾಂತ ಫೌಂಡೇಶನ್‌ನ ಸದಸ್ಯರು, ದನಗಳ ಗೊಬ್ಬರ, ಗೋಮೂತ್ರ, ನೈಸರ್ಗಿಕ ಕೃಷಿ ಮಾಡುವ ಮೂಲಕ ಉತ್ತಮ ಆದಾಯ ಗಳಿಸುವ ರೈತರನ್ನು ಗುರುತಿಸಿ ಸನ್ಮಾನಿಸಲು ಮುಂದಾಗಿದ್ದಾರೆ.

ಭೂಮಿಯ ಫಲವತ್ತತೆ ಕಾಪಾಡಿಕೊಂಡು ಇತರ ರೈತರಿಗೆ ಮಾದರಿಯಾಗಿರುವ ಇಂತಹ 29 ಗ್ರಾಮಗಳ ರೈತರಿಗೆ ವೇದಾಂತ ಫೌಂಡೇಶನ್ ವತಿಯಿಂದ ‘ಸ್ಮಾರ್ಟ್ ಫಾರ್ಮರ್’ ಪ್ರಶಸ್ತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಬೆಳಗಾವಿಯ ಮಹಿಳಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜನವರಿ 28 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಮಾಜಿ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಮೃದ್ಧಿ ಸೇವಾ ಸಂಸ್ಥೆಯ ವೀರೇಶ ಕಿವಡಸಣ್ಣ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹೇಗೆ ನಾಶವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಹೇಗೆ, ಮಧ್ಯವರ್ತಿಗಳಿಲ್ಲದೆ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪಡೆಯುವುದು ಹೇಗೆ ಎಂಬುದರ ಕುರಿತು ರೈತರಿಗೆ ತಿಳಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಪಾಟೀಲ್ ಅವರು ಹೇಳಿದ್ದಾರೆ.

SCROLL FOR NEXT