ರಾಜ್ಯ

ಬಿಟ್ ಕಾಯಿನ್ ಹಗರಣ: ಬಂಧಿತ ಇನ್ಸ್ಪೆಕ್ಟರ್, ಸೈಬರ್ ತಜ್ಞ ಸಿಐಡಿ ವಶಕ್ಕೆ

Srinivas Rao BV

ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಇನ್ಸ್ಪೆಕ್ಟರ್, ಸೈಬರ್ ತಜ್ಞರನ್ನು ಬೆಂಗಳೂರು ಕೋರ್ಟ್ ಗುರುವಾರ ಸಿಐಡಿ ವಶಕ್ಕೆ ನೀಡಿದೆ.

ಜ.31 ರ ವರೆಗೆ ಕೋರ್ಟ್ ಬಂಧಿತರನ್ನು ಸಿಐಡಿ ವಶಕ್ಕೆ ನೀಡಿದೆ. ಸಿಐಡಿ ವಿಶೇಷ ತನಿಖಾ ತಂಡ ಆರೋಪಿ ತಾಂತ್ರಿಕ ಬೆಂಬಲ ಕೇಂದ್ರಕ್ಕೆ ಸಂಬಂಧಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಡಿ.ಎಂ. ಮತ್ತು GCID ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ CEO ಸಂತೋಷ್ ಕುಮಾರ್ ಕೆ.ಎಸ್. ಅವರನ್ನು ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದ ಬಿಟ್‌ಕಾಯಿನ್ ಹಗರಣದ ತನಿಖೆಗಾಗಿ ರಚಿಸಲಾದ ಎಸ್‌ಐಟಿ ಬುಧವಾರ ಆರೋಪಿಗಳನ್ನು ಬಂಧಿಸಿತ್ತು.

ಪೊಲೀಸರು ಐಪಿಸಿ ಸೆಕ್ಷನ್ 343, 344, 409, 426, 34, 36, 37, 201 ಮತ್ತು 204 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನ ಸಿಸಿಬಿ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ, ಮಾಜಿ ಇನ್ಸ್‌ಪೆಕ್ಟರ್ ಚಂದ್ರಧರ್ ಮತ್ತು ಶ್ರೀಧರ್ ಕೆ ಪೂಜಾರ್ ವಿರುದ್ಧವೂ ಎಸ್‌ಐಟಿ ಎಫ್‌ಐಆರ್ ದಾಖಲಿಸಿದೆ. ಅವರ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಅವರನ್ನು ವಿಚಾರಣೆ ನಡೆಸಲಾಗಿದೆ.

ಈ ಹಗರಣದಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಗಳ ಕೈವಾಡವಿರುವ ಶಂಕೆ ಇದ್ದು, ಲೋಕಸಭೆ ಚುನಾವಣೆಗೂ ಮುನ್ನ ಈ ಬೆಳವಣಿಗೆ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಎಸ್‌ಐಟಿ ರಚನೆಯಾದ ನಂತರ ನಡೆದ ಮೊದಲ ಬಂಧನಗಳಿವು. ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗದಂತೆ ನೋಡಿಕೊಳ್ಳಲು ಹಗರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಐಟಿ ತಂಡ ಕಿಂಗ್‌ಪಿನ್ ಶ್ರೀಕಿಯನ್ನು ವಿಚಾರಣೆಗೆ ಕರೆಸಿತ್ತು.

SCROLL FOR NEXT