ರಾಜ್ಯ

ಬಿಟ್‌ಕಾಯಿನ್ ಹಗರಣ: ಎಸ್ಐಟಿಯಿಂದ ಪೊಲೀಸ್ ಇನ್ಸ್ ಪೆಕ್ಟರ್, ಸೈಬರ್ ಎಕ್ಸ್ ಪರ್ಟ್ ಬಂಧನ

Shilpa D

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದು ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸೈಬರ್ ತಜ್ಞರನ್ನು ಬಂಧಿಸಿದೆ.ಈ ಹಗರಣದಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಗಳ ಕೈವಾಡವಿರುವ ಶಂಕೆ ಇದ್ದು, ಲೋಕಸಭೆ ಚುನಾವಣೆಗೂ ಮುನ್ನ ಈ ಬೆಳವಣಿಗೆ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಐಟಿ ಅಧಿಕಾರಿಗಳು ಬುಧವಾರ ಐವರನ್ನು ವಿಚಾರಣೆಗೆ ಕರೆಸಿದ್ದು, ಎಲ್ಲರನ್ನೂ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರೋಪಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸೈಬರ್ ತಜ್ಞರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿ ತಂಡವು ಮೂವರು ಉಪ ಅಧೀಕ್ಷಕ ಶ್ರೇಣಿಯ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಕರೆದಿತ್ತು. ಆಪಾದಿತ ಕಿಂಗ್‌ಪಿನ್ ಶ್ರೀಕಿಯನ್ನು ಕೂಡ ತಂಡ ವಿಚಾರಣೆಗೆ ಕರೆಸಿತ್ತು. ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ (ಸಿಐಡಿ) ಅಡಿಯಲ್ಲಿ ಎಸ್‌ಐಟಿಯನ್ನು ಸೆಪ್ಟೆಂಬರ್ 2023 ರಲ್ಲಿ ರಚಿಸಲಾಯಿತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಪೋಲು ಮಾಡಿದ ಬಗ್ಗೆ ನಾವು ಚರ್ಚಿಸಿದ್ದೇವೆ.  ಈಗ ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ ಎಸ್‌ಐಟಿಯನ್ನು ರಚನೆ ಮಾಡಿದ್ದೇವೆ. ಈ ತನಿಖೆಯಲ್ಲಿ ಅಂತಾರಾಜ್ಯ, ವಿದೇಶಿಗರು ಬರುವುದರಿಂದ ತನಿಖೆ ನಿಗದಿತ ಸಮಯದಲ್ಲಿ ಮುಗಿಯಲಿದೆಯೋ, ತನಿಖೆಗೆ ಎಷ್ಟು ದಿನ ಬೇಕಾಗುವುದು ಎಂಬುದನ್ನು ಹೇಳಲು ಆಗಲ್ಲ ಎಂದು ಪರಮೇಶ್ವರ್ ಹೇಳಿದ್ದರು.

ಮಾದಕ ವಸ್ತು ಮಾರಾಟದ ಆರೋಪದ ಮೇಲೆ ಸಿಸಿಬಿ ಪೊಲೀಸರು 2020 ರಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ ನಂತರ ಬಿಟ್‌ಕಾಯಿನ್ ಹಗರಣ ಬೆಳಕಿಗೆ  ಬಂದಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿ ಹ್ಯಾಕರ್‌ನನ್ನು ಬಳಸಿಕೊಂಡು ಆಡಳಿತಾರೂಢ ಬಿಜೆಪಿ ನಾಯಕರು 2020ರಲ್ಲಿ ಕಸ್ಟಡಿಯಲ್ಲಿ ಹಗರಣವನ್ನು ಮಾಡಲು ಅವಕಾಶ ನೀಡುವ ಮೂಲಕ ಭಾರಿ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು ಸರ್ಕಾರಿ ವೆಬ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡುವ ಮೂಲಕ 11 ಕೋಟಿ ರೂ. ಹಣವನ್ನು ಬಿಟ್‌ಕಾಯಿನ್‌ಗಳಾಗಿ ಪರಿವರ್ತಿಸಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.

ಹಗರಣ ಹೊರಬೀಳುತ್ತಿದ್ದಂತೆ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕಳೆದ ವರ್ಷ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಬಿಟ್‌ಕಾಯಿನ್ ಹಗರಣದ ಕುರಿತು ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಸವರಾಜ ಬೊಮ್ಮಾಯಿಯವರ ಪಾತ್ರ ಮತ್ತು ಜವಾಬ್ದಾರಿ ಏನು?ಎಂದು ಸುರ್ಜೇವಾಲಾ ಪ್ರಶ್ನಿಸಿದ್ದು, ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಎಷ್ಟು ಬಿಟ್‌ಕಾಯಿನ್‌ಗಳನ್ನು ಕದ್ದಿದ್ದಾರೆ? ಮತ್ತು ಯಾವ ಮೌಲ್ಯದ? ಕರ್ನಾಟಕದಲ್ಲಿ ಯಾರು ಭಾಗಿಯಾಗಿದ್ದಾರೆ? ಕದ್ದ ಬಿಟ್‌ಕಾಯಿನ್‌ಗಳನ್ನು ಹ್ಯಾಕರ್ ಶ್ರೀ ಕೃಷ್ಣನ ವ್ಯಾಲೆಟ್‌ನಿಂದ ವರ್ಗಾಯಿಸಲಾಗಿದೆಯೇ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದರು. ಎಷ್ಟು ದೊಡ್ಡ ಹಗರಣ ನಡೆದರೂ ಕರ್ನಾಟಕ ಸರ್ಕಾರ ಯಾಕೆ ಸುಮ್ಮನಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು ಏಕೆ ಮೌನವಹಿಸಿದ್ದಾರೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂಗೆ ಪ್ರಧಾನಿ ಯಾಕೆ ಹೇಳಿದ್ದಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದರು.

SCROLL FOR NEXT