ರಾಜ್ಯ

ಪಿಎಸ್ಐ ಮರುಪರೀಕ್ಷೆ ಸುಗಮವಾಗಿ ನಡೆದಿದೆ: ಗೃಹ ಸಚಿವ ಡಾ. ಜಿ.ಪರಮೇಶ್ವರ್

Manjula VN

ಬೆಂಗಳೂರು: ಪಿಎಸ್ಐ 545 ಹುದ್ದೆಗಳ ನೇಮಕಾತಿಯ ಮರುಪರೀಕ್ಷೆ ಸುಗಮವಾಗಿ ನಡೆದಿದೆ. ಮುಂದಿನ ಹಂತದಲ್ಲಿ 403 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಈ ಎರಡೂ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತೆ 660 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನದಿಂದ ನಿರೀಕ್ಷೆ ಮಾಡಿದ ಪಿಎಸ್ಐ ಪರೀಕ್ಷೆ ಬಹಳ ಸುಗಮವಾಗಿ ಆಗಿದೆ. ಯಾರೂ ಕೂಡ ಬ್ಲೂಟೂತ್‌ಗಳು ತೆಗೆದುಕೊಂಡು ಒಳಗಡೆ ಹೋಗುವ ತರುವ ಪ್ರಯತ್ನ ಸಾಧ್ಯವಾಗಿಲ್ಲ. ಆ ರೀತಿ ಪ್ರಯತ್ನ ಕೂಡ ಆಗಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಸುಮಾರು 54,000 ಜನ ಪರೀಕ್ಷೆ ಬರೆಯಬೇಕಿತ್ತು, ಅದರಲ್ಲಿ ಶೇ.65 ರಿಂದ 70ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಅದನ್ನು ವ್ಯಾಲ್ಯೂಯೇಷನ್ ಮಾಡಿ, ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆಯನ್ನು ಮಾಡುತ್ತೇವೆ. ಇದರ ಬಳಿಕ 403 ಸಬ್ ಇನ್ಸ್‌ಪೆಕ್ಟರ್‌ಗಳ ಪರೀಕ್ಷೆ ಮಾಡಬೇಕು. ಅದನ್ನು ಕೂಡ ಕೆಇಎ ಅವರಿಗೆ ವಹಿಸಬೇಕು ಎಂಬ ಚಿಂತನೆಗಳಿವೆ ಎಂದು ತಿಳಿಸಿದರು.

ಮೊದಲನೆದಾಗಿ ಕೆಇಎ ನಿರ್ದೇಶಕಿ ರಮ್ಯಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡಿಕೊಟ್ಟಿದ್ದಾರೆ. ಅದೇ ಪ್ರಕಾರ ಮುಂದೆ ಕೂಡ ಮಾಡಿದರೆ ಯಾವುದೇ ಗೊಂದಲಕ್ಕೆ ಆಸ್ಪದ ಇರುವುದಿಲ್ಲ. 403 ಹುದ್ದೆಗಳ ಆಯ್ಕೆ ಬಗ್ಗೆ ನೋಟಿಫಿಕೇಶನ್ ಆಗಿದೆ. ದೈಹಿಕ ಪರೀಕ್ಷೆ ಕೂಡ ಆಗಿದ್ದು ಲಿಖಿತ ಪರೀಕ್ಷೆ ನಡೆಯಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ 948 ಸಬ್ ಇನ್ಸ್‌ಪೆಕ್ಟರ್‌ಗಳು ಸಿಗುತ್ತಾರೆ. ಇದಾದ ಮೇಲೆ 660 ಸಬ್ ಇನ್ಸ್ಪೆಕ್ಟರ್ ಗಳಿಗೆ ಆಯ್ಕೆ ನಡೆಯಬೇಕಿದೆ ಎಂದರು.

SCROLL FOR NEXT