ಹಾಸನ: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ SIT ತನಿಖೆ ಪೂರ್ಣಗೊಂಡ ನಂತರ ವಿಶೇಷ ಸುದ್ದಿ ನೀಡುವುದಾಗಿ ಹೇಳಿದ್ದಾರೆ.
52 ದಿನಗಳ ನ್ಯಾಯಾಂಗ ಬಂಧನ ದ ನಂತರ ಬಿಡುಗಡೆಗೊಂಡಿರುವ ಬಿಜೆಪಿ ಮುಖಂಡ ದೇವರಾಜೇಗೌಡ, ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಾಸನದಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಬೃಹತ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಸಮಾವೇಶದಲ್ಲಿ ಹೊಸದಾಗಿ ಸಂಸತ್ ಗೆ ಆಯ್ಕೆಗೊಂಡಿರುವ ಬಿಜೆಪಿ-ಜೆಡಿಎಸ್ ಸಂಸದರು, ಕೇಂದ್ರ ಸಚಿವರನ್ನು ಸನ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ಈಗಾಗಲೇ ಎರಡೂ ಮೈತ್ರಿ ಪಕ್ಷಗಳ ಹಿರಿಯ ನಾಯಕರ ಜತೆ ಚರ್ಚಿಸಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕರ್ನಾಟಕದ ಕೇಂದ್ರ ಸಚಿವರನ್ನು ಸನ್ಮಾನಿಸಲಾಗುತ್ತದೆ ಎಂದೂ ದೇವರಾಜೇಗೌಡ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮುಂಬರುವ ಜಿ.ಪಂ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ಕೇಂದ್ರ ಉಕ್ಕು ಮತ್ತು ಪ್ರಮುಖ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಸನಕ್ಕೆ ಭೇಟಿ ನೀಡಲಿದ್ದಾರೆ. ಜಿಪಂ, ತಾ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಬೇಕು ಎಂದು ದೇವರಾಜೇಗೌಡ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣದ ತನಿಖೆಯನ್ನು ಎಸ್‌ಐಟಿ ಪೂರ್ಣಗೊಳಿಸಿದ ನಂತರ ವಿಶೇಷ ಸುದ್ದಿ ನೀಡುತ್ತೇನೆ ಎಂದು ದೇವರಾಜೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಸ್‌ಐಟಿ ತನಗೆ ನೋಟಿಸ್ ನೀಡುವ ಮುನ್ನವೇ ತನ್ನ ಬಂಧನದ ಬಗ್ಗೆ ನನಗೆ ತಿಳಿದಿತ್ತು ಎಂದು ಅವರು ಹೇಳಿದರು. ದೇವರಾಜೇಗೌಡ ಅವರನ್ನು ಮೇ 10 ರಂದು ಹಿರಿಯೂರು ಚೆಕ್ ಪೋಸ್ಟ್ ಬಳಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಿದ್ದನ್ನು ಸ್ಮರಿಸಬಹುದಾಗಿದೆ.