ಚಿಕ್ಕಮಗಳೂರು: ಕಳೆದ 4-5 ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿ ಅಬ್ಬರಿಸುತ್ತಿರುವ ವರುಣನಿಂದ ಜೀವ ನದಿಗಳು ಉಕ್ಕಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಗಾಳಿಗೆ ಮರಗಳು ಉರುಳಿಬಿದ್ದಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ, ಕೆಲವೆಡೆ ಭೂ ಕುಸಿತವೂ ಉಂಟಾಗಿದೆ.
ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ನಿರಂತರವಾಗಿ ಬಲವಾದ ಧಂಡಿ ಗಾಳಿ ಬೀಸುತ್ತಿದೆ. ಬೀಸುತ್ತಿರುವ ಈ ಗಾಳಿಗೆ ಮಲೆನಾಡಿನ ಹಲವೆಡೆ ಮರಗಳು ಉರುಳಿವೆ. ಇದರಿಂದ ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿರುವ ಶೃಂಗೇರಿಯ ತ್ಯಾವಣ ಬಳಿ ಬುಧವಾರ ರಾತ್ರಿ ಮರವೊಂದು ಬಿದ್ದ ಪರಿಣಾಮ ಇಡೀ ರಾತ್ರಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಗುರುವಾರ ಬೆಳಿಗ್ಗೆ ಮರ ತೆರವುಗೊಳಿಸಿದ ಬಳಿ ವಾಹನಗಳ ಸಂಚಾರ ಪುನಾರಂಭಗೊಂಡಿತು.
ಶೃಂಗೇರಿಯಲ್ಲಿ ಹಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಗುರುವಾರದ ಕೆರೆಕಟ್ಟೆಯಲ್ಲಿ 234.8 ಮಿ.ಮೀ ಮಳೆಯಾಗಿದೆ.
ಮಳೆಯ ಪರಿಣಾಮ ತುಂಗಾ ನದಿಯ ದಡದಲ್ಲಿರುವ ವಾಹನಗಳ ನಿಲುಗಡೆ ಸ್ಥಳವಾದ ಗಾಂಧಿ ಮೈದಾನ ಜಲಾವೃತವಾಗಿದ್ದು, ಶಾರದಾಂಬ ದೇವಸ್ಥಾನದ ಬೀದಿಯನ್ನು ವಾಹನಗಳ ಸಂಚಾರಕ್ಕೆ ದ್ವಿಮುಖ ರಸ್ತೆಯನ್ನಾಗಿ ಮಾಡಲಾಗಿದೆ.
ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಸ್ನಾನಘಟ್ಟ ಹಾಗೂ ಕಪ್ಪೆ ಶಂಕರ ದೇವಸ್ಥಾನದ ಮೆಟ್ಟಿಲುಗಳು ಸಂಪೂರ್ಣ ನೀರಿನಲ್ಲಿ ಮುಳುಗಿವೆ. ಸ್ನಾನಘಟ್ಟದ ಬಳಿ ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.
ಮೂಡಿಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೊಚ್ಚಿ ಹೋಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಕಳಸ ಕಡೆಗೆ ಕಾರು ಹೋಗುತ್ತಿತ್ತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಯುದ್ದಕ್ಕೂ ನಿರ್ಮಿಸಲಾಗಿರುವ ಗೋಡೆಗಳು ಬಿರುಕು ಬಿಟ್ಟಿವೆ. ಹಿಂಬದಿಯ ಗೋಡೆಗಳು ಕುಸಿದು ಬೀಳುವ ಭೀತಿ ಎದುರಾಗಿದೆ. ಕಳಸ ಮತ್ತು ಹೊರನಾಡು ಸಂಪರ್ಕಿಸುವ ಭದ್ರಾ ನದಿಗೆ ಅಡ್ಡಲಾಗಿರುವ ಬಾಳೆಹೊಳೆ ಸೇತುವೆ ಕೂಡ ಮುಳುಗಡೆಯಾಗಿದೆ.
ಬೆಟ್ಟದ ಇಳಿಜಾರು ಪ್ರದೇಶದ ಹಳ್ಳಿಗಳಲ್ಲಿ ವಾಸಿಸುವ ಸ್ಥಳೀಯರು ಭೂಕುಸಿತದ ಭಯದಲ್ಲಿದ್ದು, ರಕ್ಷಣೆಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.