ರಾಜ್ಯ

ಜಿಲ್ಲಾಧಿಕಾರಿಗಳೆಂದರೆ ಮಹಾರಾಜರಲ್ಲ: ಸಿದ್ದರಾಮಯ್ಯ; ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ; ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ನಿಧನ; ಇವು ಇಂದಿನ ಪ್ರಮುಖ ಸುದ್ದಿಗಳು 08-07-24

ಜಿಲ್ಲಾಧಿಕಾರಿಗಳೆಂದರೆ ಮಹಾರಾಜರಲ್ಲ, ಜನ ಸೇವಕರು: ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಡಿಸಿಗಳು ಮತ್ತು ಸಿಇಒಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳೆಂದರೆ ಮಹಾರಾಜರಲ್ಲ, ಜನ ಸೇವಕರು. ಮಹಾರಾಜ ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಬೇಕು ಎಂದು ಹೇಳಿದರು. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ-ಎಸ್'ಪಿ-ಸಿಇಒ ಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಲ್ಲದೆ ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.

ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ 43 ವರ್ಷದ ಕೆ.ಜಿ ಪ್ರತಾಪ್ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಿಕೆರೆಯ ಶಿವಮೊಗ್ಗ-ಹರಿಹರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರು ನಿಲ್ಲಿಸಿ ವಿಷಸೇವಿಸಿದ್ದಾರೆ. ವಿಷ ಸೇವಿಸಿದ್ದ ಕೆ.ಜಿ ಪ್ರತಾಪ್ ಕುಮಾರ್ ರನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕೆಜಿ ಪ್ರತಾಪ್ ಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಕೆಜಿ ಪ್ರತಾಪ್ ಕುಮಾರ್ ಅವರು ಬಿ.ಸಿ ಪಾಟೀಲ್ ಹಿರಿಯ ಪುತ್ರಿ ಸೌಮ್ಯಾ ಅವರ ಪತಿ ಎಂದು ತಿಳಿದುಬಂದಿದೆ.

 ಹಾವೇರಿಯಲ್ಲಿ ಇಲಿ ಜ್ವರಕ್ಕೆ ವ್ಯಕ್ತಿ ಬಲಿ

ರಾಜ್ಯದಲ್ಲಿ ಡೆಂಗ್ಯೂ ಆರ್ಭಟದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದೆ. ನಿನ್ನೆಯಷ್ಟೇ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಪತ್ತೆಯಾಗಿತ್ತು. ಇಂದು ಹಾವೇರಿಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ನಿವಾಸಿ 72 ವರ್ಷದ ಉಮೇಶ್ ಎಂಬುವರು ಇಲಿ ಜ್ವರದಿಂದ ಮೃತಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಉಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ನಿಧನ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ಅವರು ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಇಂದು ಸಂಜೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಿತು. ನಿನ್ನೆಯಷ್ಟೇ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

3 ತಿಂಗಳ ಮಗುವನ್ನು ಬಾವಿಗೆ ಎಸೆದು ಕೊಂದ ಅಪ್ರಾಪ್ತೆ

ತನ್ನ ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರನ ಅಣ್ಣನ ಮೂರು ತಿಂಗಳ ಹೆಣ್ಣು ಮಗುವನ್ನು ಬಾವಿಗೆ ಎಸೆದು ಕೊಂದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ನಗರದ ಅಂಬೇಡ್ಕರ್ ಲೇಔಟ್‌ನಲ್ಲಿ ವಾಸವಾಗಿರುವ ನಾಗೇಶ್ ಮತ್ತು ಚಿಟ್ಟೆಮ್ಮ ದಂಪತಿಯ ಪುತ್ರಿ ಮೂರು ತಿಂಗಳ ಮಗು ಮೀನಾಕ್ಷಿ ಸಾವನ್ನಪ್ಪಿದೆ. ಅಪ್ರಾಪ್ತೆ ಯಲ್ಲಪ್ಪನ ಬಳಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾಳೆ. ಯಲ್ಲಪ್ಪ ಆಕೆಯ ಪ್ರೀತಿಯನ್ನು ತಿರಸ್ಕರಿಸಿದ್ದನು. ಇದರಿಂದ ಕೋಪಗೊಂಡ ಅಪ್ರಾಪ್ತ ಬಾಲಕಿ ಯಾರೂ ಇಲ್ಲದ ಸಮಯದಲ್ಲಿ ಯಲ್ಲಪ್ಪನ ಅಣ್ಣನ ಮಗುವನ್ನು ಎತ್ತುಕೊಂಡು ಹೋಗಿ ಬಾವಿಗೆ ಎಸೆದು ಕೊಂದಿದ್ದಳು. ಈ ಸಂಬಂಧ ಅಪ್ರಾಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸೂಕ್ತ ಸಾಕ್ಷ್ಯಧಾರ ಸಂಗ್ರಹದ ನಂತರ ಚಾರ್ಜ್ ಶೀಟ್- ಪರಮೇಶ್ವರ್

ನಟ ದರ್ಶನ್, ಪವಿತ್ರಗೌಡ ಸೇರಿದಂತೆ 15 ಮಂದಿ ಆರೋಪಿಗಳಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಸಾಕ್ಷ್ಯಧಾರ ಸಂಗ್ರಹದ ನಂತರ ಜಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಸಾಕ್ಷ್ಯಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಆ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಾಗುವುದು, ಅದಕ್ಕೆ ತನ್ನದೇ ಆದ ಪ್ರಕ್ರಿಯೆಗಳಿವೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಪರಮೇಶ್ವರ್ ಮತ್ತೊಮ್ಮೆ ಪುನರುಚ್ಚರಿಸಿದರು. ಈಮಧ್ಯೆ, ರೇಣುಕಾಸ್ವಾಮಿ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿದ ಬಳಿಕ ಆರೋಪಿ ಪ್ರದೋಶ್ ಎಂಬಾತನನ್ನು ತನ್ನದೇ ಕಾರಿನಲ್ಲಿ ಗಿರಿನಗರಕ್ಕೆ ಕರೆದುಕೊಂಡು ಬಂದಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಕಾರ್ತಿಕ್ ಪುರೋಹಿತ್ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT