ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿರುವ 77 ಕೈದಿಗಳನ್ನು ಮಂಗಳವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.
ಸನ್ನಡತೆ ಆಧಾರದ ವರ್ಷದಲ್ಲಿ ಮೂರು ಬಾರಿ ಜೈಲಿನ ಕೈದಿಗಳನ್ನು ಬಿಡುಗಡೆಗೊಳಿಸುವ ಆದೇಶದನ್ವಯ, ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ 77 ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಪರಮೇಶ್ವರ ಅವರ ನೇತೃತ್ವದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಇನ್ನುಮುಂದೆ ಸನ್ನಡತೆ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಬದಲು ಮೂರು ಬಾರಿ ಕೈದಿಗಳನ್ನು ಬಂಧಮುಕ್ತಗೊಳಿಸಲಾಗುವುದು ಎಂದರು. ಈಗ ವರ್ಷಕ್ಕೆ ಎರಡು ಬಾರಿ ಸ್ವಾತಂತ್ರ್ಯೋತ್ಸವದ ವೇಳೆ ಮತ್ತು ಗಣರಾಜ್ಯೋತ್ಸವದ ವೇಳೆ ಮಾತ್ರ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಹೈಕೋರ್ಟ್ ಆದೇಶದ ಮೇರೆಗೆ ಸನ್ನಡತೆ ತೋರಿದ ಬಂಧಿಗಳು ಬಿಡುಗಡೆಗೆ ಅವಕಾಶ ಇದೆ. ಇಂದು ಕಾರಾಗೃಹದಲ್ಲಿದ್ದ 77 ಜನರನ್ನು ಬಿಡುಗಡೆ ಮಾಡಲಾಗಿದೆ. 10, 15 ವರ್ಷ ಜೈಲಿನಲ್ಲೇ ಜೀವನ ಕಳೆದು ಸನ್ನಡತೆ ಕಂಡುಕೊಂಡಿದ್ದಾರೆ. ಒಂದೇ ದಿನದಲ್ಲಿ ಸನ್ನಡತೆ ಪರಿಗಣಿಸಲ್ಲ. ಅದಕ್ಕೆ ಆದ ಕೆಲ ಮಾನದಂಡಗಳು ಇವೆ. ಜೈಲಿನಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ?, ಪರಿವರ್ತನೆಯಾಗಿದ್ದಾರೆ?, ಸಮಾಜದ ನಡುವೆ ಯಾವ ರೀತಿ ಅವರು ಇರಲಿದ್ದಾರೆ ಎಂಬುವುದನ್ನು ಮನನ ಮಾಡಿಕೊಳ್ಳಲಾಗುತ್ತದೆ. ನಂತರ ಸಮಿತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಬಿಡುಗಡೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ಹಾಕಿದ ನಂತರ ಬಿಡುಗಡೆ ಮಾಡುವುದು ನಿಮಯ ಎಂದು ತಿಳಿಸಿದರು.
ಇಲಾಖೆಯಲ್ಲಿ ಬದಲಾವಣೆಯನ್ನು ತರಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸನ್ನಡತೆಯ ಮೇಲೆ ಬಿಡುಗಡೆ ಹೊಂದಿರುವ ಸತೀಶ್ ಎಂಬಾತ 'ತಾನು ಕಾನೂನು ಡಿಪ್ಲೋಮಾ ಮುಗಿಸಿದ್ದೇನೆ. ಹೊರಗಡೆ ಹೋದಾಗ ಜೀವನಕ್ಕೆ ಉಪಯೋಗವಾಗುತ್ತದೆ' ಎಂದು ಹೇಳಿದ್ದಾನೆ. ಬಹಳ ಜನ ಪರಿವರ್ತನೆ ಹೊಂದಲು ಇಂತಹ ಅವಕಾಶ ಕಲ್ಪಿಸಿಕೊಡುತ್ತೇವೆ. ಕಾರ್ಪೆಂಟರ್, ಎಲೆಕ್ಟ್ರಿಕ್ ಕೆಲಸ, ಕಂಪ್ಯೂಟರ್ ತರಬೇತಿ ಕಲಿಸಿಕೊಡುತ್ತೇವೆ. ಕೈದಿಗಳು ಬದಲಾವಣೆ ಹೊಂದಲು ಅವಕಾಶವಾಗುತ್ತದೆ ಎಂದು ಸಚಿವರು ತಿಳಿಸಿದರು.