ಶಿವಮೊಗ್ಗ: ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್ ಸೋಮವಾರ ಹೊನ್ನಾಳಿ ತಾಲೂಕಿನ ಅರಕೆರೆ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಟೀಲ್ ಅವರ ಹಿರಿಯ ಪುತ್ರಿ ಸೌಮ್ಯಾ ಅವರ ಪತಿ ಪ್ರತಾಪ್ ಕುಮಾರ್.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಲಗೆರೆ ಗ್ರಾಮದವರಾದ ಪ್ರತಾಪ್ ಕುಮಾರ್ (43) ಅವರು ಅರಕೆರೆ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಘಟನೆಯ ಬಗ್ಗೆ ತಿಳಿದುಕೊಳ್ಳಲು ಶಿವಮೊಗ್ಗಕ್ಕೆ ಪಾಟೀಲ್ ಪ್ರಯಾಣ ಬೆಳೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಪ್ರತಾಪ್ ಅವರು ತಮ್ಮ ಮಾವ ಪಾಟೀಲ್ ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
ಇದೇ ವೇಳೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಪ್ರತಾಪ್ 2008ರಲ್ಲಿ ತಮ್ಮ ಮಗಳನ್ನು ಮದುವೆಯಾದರು, ಅವರು ನಮ್ಮೊಂದಿಗೆ ಹಿರೇಕೆರೂರಿನಲ್ಲಿ ವಾಸಿಸುತ್ತಿದ್ದರು ಮತ್ತು ನಮ್ಮ ಕೃಷಿ ಭೂಮಿ ಮತ್ತು ಮನೆ ಸೇರಿ ಹಲವು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಊರಿಗೆ ಹೋಗುವುದಾಗಿ ಹೇಳಿ ಬೆಳಿಗ್ಗೆ ನಮ್ಮ ಮನೆಯಿಂದ ಹೊರಟರು. ಮಧ್ಯಾಹ್ನ 1.45 ರ ಸುಮಾರಿಗೆ ಅವರ ಸಹೋದರ ನನಗೆ ಕರೆ ಮಾಡಿ ಪ್ರತಾಪ್ ಫೋನ್ ಮಾಡಿ ಕೆಲವು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾಗಿ ನನಗೆ ತಿಳಿಸಿದರು.
ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಹೇಳುವಂತೆ ಆತನ ಸಹೋದರ ನನ್ನ ಬಳಿ ಮನವಿ ಮಾಡಿದರು. ನಂತರ ನಾನು ದಾವಣಗೆರೆ ಹಾಗೂ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಶಿವಮೊಗ್ಗ-ಹರಿಹರ ರಸ್ತೆ ಮಧ್ಯೆ ಆತ ಪತ್ತೆಯಾಗಿದ್ದು, ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತು. ಬಳಿಕ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎಂಬುದಾಗಿ ಪಾಟೀಲ್ ವಿವರಿಸಿದರು.
ಮದುವೆಯಾಗಿ ಇಷ್ಟು ವರ್ಷವಾದರೂ ಮಕ್ಕಳಿಲ್ಲದ ಕಾರಣ ಪ್ರತಾಪ್ ಬೇಸರಗೊಂಡಿದ್ದರು ಎಂದು ಪಾಟೀಲ್ ಹೇಳಿಕೊಂಡಿದ್ದಾರೆ. ಆತನಿಗೂ ಕುಡಿತದ ಚಟ ಇತ್ತು. ಅವರು Fatty liver ಕಾಯಿಲೆಯಿಂದ ಬಳಲುತ್ತಿದ್ದರು. ಕುಡಿತದ ಚಟ ಬಿಡಿಸಲು ನಾನು ಅವರನ್ನು ಬೆಂಗಳೂರಿನ ಡಿ-ಅಡಿಕ್ಷನ್ ಸೆಂಟರ್‌ಗೆ ಕರೆದೊಯ್ದಿದ್ದೆ. ಆನಂತರ ಅವರು ಚೇತರಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಸಂತಾಪ ಸೂಚಿಸಿದ್ದಾರೆ.