ಬೆಂಗಳೂರು: ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ‍್ರದೇಶದಲ್ಲಿ ಜುಲೈ 3ರಂದು ಶವವಾಗಿ ಪತ್ತೆಯಾಗಿದ್ದ 5 ವರ್ಷದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗಾಗಿ ರೈಲ್ವೇ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಮೃತ ಬಾಲಕಿಯನ್ನು ಮರಿಯಮ್ ಎಂದು ಗುರ್ತಿಸಲಾಗಿದೆ. ಬಾಲಕಿಯ ಮೃತದೇಹವನ್ನು ಮರುದಿನವೇ ಆಕೆಯ ತಂದೆ ಶಿವು ಮೃತದೇಹವನ್ನು ಗುರುತಿಸಿದ್ದರು.
ಬಾಲಕಿಯ ತಾಯಿ ಹೀನಾ, ಶಿವು ಅವರನ್ನು ತೊರೆದು ಪ್ರಿಯಕರ ರಾಜಾ ಅಲಿಯಾಸ್ ಮಣಿಕಾಂತ ಎಂಬಾತನ ಜೊತೆ ವಾಸವಿದ್ದರು. ರೈಲ್ವೆ ನಿಲ್ದಾಣ, ದರ್ಗಾ ಬಳಿ ಭಿಕ್ಷಾಟನೆ ಮಾಡಿಕೊಂಡಿದ್ದ ಹೀನಾ, ರಾಜು ಜೊತೆಯಲ್ಲಿಯೇ ಮರಿಯಮ್ ಕೂಡ ಇದ್ದಳು ಎಂದು ಶಿವು ಹೇಳಿಕೊಂಡಿದ್ದಾರೆ.
ಮರಿಯಮ್ ಶವ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ತಲೆಮರೆಸಿಕೊಂಡಿದ್ದು, ಇಬ್ಬರೂ ಸೇರಿ ಬಾಲಕಿಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇದೀಗ ಬೆಂಗಳೂರು ಕೇಂದ್ರ ರೈಲ್ವೆ ಠಾಣಾ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಇಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದವರು ಈ ದೂರವಾಣಿ 9480802113, 9480802102, 9480802140 ಸಂಖ್ಯೆ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು ಮತ್ತು ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.