ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿ ಕಾರವಾರ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದು, ಇದುವರೆಗೆ ಒಟ್ಟು 6 ಜನರ ಮೃತದೇಹಗಳು ಪತ್ತೆಯಾಗಿವೆ.
10 ಮಂದಿಯ ಪೈಕಿ ಐವರು ಒಂದೇ ಕುಟುಂಬದ ಸದಸ್ಯರಿದ್ದಾರೆಂದು ಹೇಳಲಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಆವಾತಿಕಾ ಹಾಗೂ ಪುತ್ರ ರೋಷನ್(11) ಹಾಗೂ ಟ್ರಕ್ ಚಾಲಕನ ಶವ ಪತ್ತೆಯಾಗಿದೆ. ಇನ್ನುಳಿದವರ ಮೃತ ದೇಹಗಳಿಗಾಗಿ ಎನ್ಡಿಆರ್ಎಫ್ ಶೋಧ ಕಾರ್ಯ ಮುಂದುವರೆಸಿದೆ.
ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಸಂಪೂರ್ಣ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಹಾಗೂ ಹಲವು ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿವೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.