ಬೆಳಗಾವಿ: ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟ್ ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲವೊಂದನ್ನು ಬೆಳಗಾವಿ ಪೊಲೀಸರು ಪತ್ತೆ ಮಾಡಿದ್ದಾರೆ.
ಜಾಲದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಅಕ್ರಮಕ್ಕೆ ಬಳಸಿದ 15 ಕಂಪ್ಯೂಟರ್‌ಗಳು, ಒಂದು ಲ್ಯಾಪ್‌ಟಾಪ್ ಮತ್ತು ಐದು ಮೊಬೈಲ್ ಫೋನ್‌ಗಳು ಹಾಗೂ ರೂ.12 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಚ್ಚಿಭೌಳಿಯ ಇಂದಿರಾನಗರ ಮೂಲದ ಅರಗೊಂಡ ಅರವಿಂದ ಅಲಿಯಾಸ್ ಅರುಣಕುಮಾರ್ ಅರಗೊಂಡ ಪ್ರಕಾಶಂ (47) ಬಂಧಿತ.
ಆರೋಪಿ ವಿರುದ್ಧ ಈಗಾಗಲೇ ತೆಲಂಗಾಣದಲ್ಲಿ 6, ಭೂಪಾಲ್‌ನಲ್ಲಿ 1, ಬೆಂಗಳೂರಿನ ಅಶೋಕ ನಗರ ಹಾಗೂ ಆರ್.ಟಿ.ನಗರದ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅರುಣ್ ಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.
ನೀಟ್‌ನಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಅರುಣ್ ಕುಮಾರ್, ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಅವರ ಪೋಷಕರಿಗೆ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಈತ ಬೆಳಗಾವಿಯೊಂದರಲ್ಲೇ 1.08 ಕೋಟಿ ಕಲೆಕ್ಷನ್ ಮಾಡಿದ್ದ ಎಂಬುದೂ ತಿಳಿದುಬಂದಿತ್ತು