ಬೆಂಗಳೂರು: ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ರೈಲು-ಕಮ್-ರಸ್ತೆ ಮೇಲ್ಸೇತುವೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಪ್ರಾಯೋಗಿಕ ಸಾರ್ವಜನಿಕ ಸಂಚಾರಕ್ಕೆ ಚಾಲನೆ ನೀಡಿದರು.
ಬೆಂಗಳೂರು ಮೆಟ್ರೋದ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ವರೆಗೆ ನಿರ್ಮಾಣವಾಗಿರುವ ಸುಮಾರು 3.6 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಡಿಕೆ ಶಿವಕುಮಾರ್ ಇಂದು ಉದ್ಘಾಟಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಇತರ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಡಬಲ್ ಡೆಕ್ಕರ್ ಮೇಲ್ಸೇತುವೆಯು ಫ್ಲೈಓವರ್‌ನ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಬಲ್ ಡೆಕ್ಕರ್ ಫ್ಲೈ ಓವರ್ ಸಂಪರ್ಕಿಸುವ ರಸ್ತೆಗಳು: ಈ ವ್ಯವಸ್ಥೆಯಲ್ಲಿ ಇಳಿಜಾರುಗಳ ನಿರ್ಮಾಣವನ್ನು M/s ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಕಾರ್ಯಗತಗೊಳಿಸಲಾಗಿದೆ. ರಾಗಿಗುಡ್ಡದಿಂದ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಬರುವ ವಾಹನ ಬಳಕೆದಾರರು ರ್‍ಯಾಂಪ್ ಎ ಮೂಲಕ ಹೊಸೂರು ರಸ್ತೆ ಮತ್ತು ಸಿ ರ್‍ಯಾಂಪ್ ಮೂಲಕ ಎಚ್ ಎಸ್ ಆರ್ ಲೇಔಟ್ ತಲುಪುತ್ತಾರೆ.
ಇದಲ್ಲದೆ, ನೆಲಮಟ್ಟದಲ್ಲಿರುವ ರ್‍ಯಾಂಪ್ ಬಿ, ಬಿಟಿಎಂ ಬದಿಯಿಂದ ಹೊರವರ್ತುಲ ರಸ್ತೆ ಮತ್ತು ಹೊಸೂರು ರಸ್ತೆಯನ್ನು ಪ್ರವೇಶಿಸಲು ರ್‍ಯಾಂಪ್ ಎ ಯನ್ನು ಸಂಪರ್ಕಿಸುತ್ತದೆ. ಹೆಚ್ ಎಸ್‌ಆರ್ ಲೇಔಟ್‌ನಿಂದ ಬರುವವರು ರ್‍ಯಾಂಪ್ ಎ ಮತ್ತು ಹಳದಿ ಮೆಟ್ರೊ ರೈಲಿನ ಮೇಲೆ ಹಾದು ಹೋಗುವ ರ್‍ಯಾಂಪ್ ಡಿ ಮೂಲಕ ರಾಗಿಗುಡ್ಡ ಕಡೆಗೆ ತಲುಪಲು ಸಾಧ್ಯವಾಗುತ್ತದೆ ಮತ್ತು ಬಿಟಿಎಂ ಲೇಔಟ್‌ಗೆ ಪ್ರವೇಶಿಸಲು ಕೆಳಗಿನ ರ್‍ಯಾಂಪ್ ಇಯೊಂದಿಗೆ ಮುಂದುವರಿಯುತ್ತದೆ.