ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದ ಆರೋಪದಲ್ಲಿ ಇ.ಡಿ ಬಂಧನದ ಆತಂಕದಲ್ಲಿರುವ ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಹಾಗೂ ಮತ್ತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
187 ಕೋಟಿ ರೂ.ಗಳ ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತಮ್ಮನ್ನು ಹುಡುಕುತ್ತಿರುವ ಬೆಳವಣಿಗೆಗಳ ಬಗ್ಗೆ ದದ್ದಲ್, ಸಿಎಂ, ಡಿಸಿಎಂ, ಸ್ಪೀಕರ್ ಹಾಗೂ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಈಗಾಗಲೇ ದದ್ದಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇಷ್ಟು ದಿನ ನಾಪತ್ತೆಯಾಗಿದ್ದ ದದ್ದಲ್ ಅವರು, ಸೋಮವಾರದಿಂದ ಆರಂಭವಾದ ಅಧಿವೇಶನದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ.
ಕಲಾಪ ನಡೆಯುವಾಗ ಶಾಸಕರನ್ನು ಬಂಧಿಸಬೇಕಾದರೆ ಸ್ಪೀಕರ್ ಅನುಮತಿ ಕಡ್ಡಾಯ. ಅಧಿವೇಶನ ನಡೆಯುವಾಗ ಬಂಧನಕ್ಕೆ ಸ್ಪೀಕರ್ ಅನುಮತಿ ನೀಡದೇ ಇದ್ದರೆ ಬಂಧನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಡಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.