ಸುದ್ದಿ ಮುಖ್ಯಾಂಶಗಳು online desk
ರಾಜ್ಯ

ಡೆಂಗ್ಯೂ: ವೈದ್ಯಕೀಯ ವಿದ್ಯಾರ್ಥಿ ಸಾವು; ವಾಲ್ಮೀಕಿ ನಿಗಮ ಹಗರಣ ನಡೆದಿದೆ, ಆದರೆ ಅದು ಸರ್ಕಾರಕ್ಕೆ ಸಂಬಂಧವಿಲ್ಲ-ಸಿಎಂ; 54 ಕಡೆ ಲೋಕಾಯುಕ್ತ ದಾಳಿ| ಇವು ಇಂದಿನ ಪ್ರಮುಖ ಸುದ್ದಿಗಳು 19-07-2024

ರಾಜ್ಯದ 54 ಕಡೆ ಲೋಕಾಯುಕ್ತ ದಾಳಿ

ರಾಜ್ಯದ 54 ಕಡೆಗಳಲ್ಲಿ ಶುಕ್ರವಾರ ಲೋಕಾಯುಕ್ತ ದಾಳಿ ನಡೆದಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿಎಲ್ ಆನಂದ್ ಸೇರಿದಂತೆ 13 ಮಂದಿ ಸರ್ಕಾರಿ ಅಧಿಕಾರಿಗಳ ಆಸ್ತಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್, ಯಾದಗಿರಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಲವಂತ ರಾಠೋಡ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಪಶು ವೈದ್ಯಾಧಿಕಾರಿ ಆರ್ ಸಿದ್ದಪ್ಪ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ರಮೇಶ್ ಕುಮಾರ್, ಕಾನೂನು ಮಾಪನ ಶಾಸ್ತ್ರ ಉಪ ನಿಯಂತ್ರಕ ಅಥರ್ ಅಲಿ, ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬಿ ಗೌಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮತ್ತು ಮಂಡ್ಯ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಶುಕ್ರವಾರ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಡೆಂಗ್ಯು: ಹಾಸನದಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಾವು

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ತಾಲೂಕಿನ ಗೋಹಳ್ಳಿ ಮೂಲದ ಕುಶಾಲ್ ಮೃತ ವಿದ್ಯಾರ್ಥಿಯಾಗಿದ್ದು, ಗುರುವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಶಾಲ್‌ನ ಪೋಷಕರು ಕೂಡ ಡೆಂಗ್ಯೂ ಸೋಂಕುವಿನಿಂದ ಬಳಲುತ್ತಿದ್ದು, ಹಿಮ್ಸ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳೆ: ಜು.20 ವರೆಗೆ IMDಯಿಂದ ರೆಡ್ ಅಲರ್ಟ್; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಕರ್ನಾಟಕದ ಹಲವು ಭಾಗಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ(IMD) ಜು.20ರ ವರೆಗೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಹಾವೇರಿಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಭಾರಿ ಮಳೆಯ ಪರಿಣಾಮ ಮನೆಯೊಂದರ ಗೋಡೆ ಕುಸಿದು, ಅವಳಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆಘಾತ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನು ಅಂಕೋಲಾದ ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿತಗೊಂಡು ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯಾಚಾರಣೆ ಮುಂದುವರೆದಿದೆ. ಈಗಾಗಲೆ 4 ಮೃತದೇಹ ತೆಗೆದಿದ್ದು ಅವಶೇಷಗಳಡಿ ಕೇರಳ ಲಾರಿ ಚಾಲಕ ಸೇರಿದಂತೆ ಇನ್ನೂ ಮೂವರು ಸಿಲುಕಿದ್ದಾರೆ ಎನ್ನಲಾಗಿದೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಕ್ಷೇಪಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳಿಂದ #Boycott Phonepe ಅಭಿಯಾನ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರ್ಕಾರದ ಚಿಂತನೆಗೆ ವಿರೋಧ ವ್ಯಕ್ತಪಡಿಸಿದ್ದ ಉದ್ಯಮಿಗಳ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು #Boycott ಫೋನ್ ಪೇ ಅಭಿಯಾನ ಆರಂಭಿಸಿವೆ. ಇದಷ್ಟೇ ಅಲ್ಲದೇ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಜಾರಿಗೆ ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದ, ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ಮೋಹನ್‌ ದಾಸ್‌ ಪೈ ಮತ್ತು ಫೋನ್ ಪೇ ಸಂಸ್ಥೆಯ ಭಾವಚಿತ್ರ ಹಿಡಿದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ವಾಲ್ಮೀಕಿ ನಿಗಮ ಹಗರಣ ನಡೆದಿದೆ, ಆದರೆ ಅದು ಸರ್ಕಾರಕ್ಕೆ ಸಂಬಂಧವಿಲ್ಲ-ಸಿಎಂ

ವಾಲ್ಮೀಕಿ ನಿಗಮದಲ್ಲಿನ ಅಕ್ರಮಗಳ ಬಗ್ಗೆ ವಿಪಕ್ಷಗಳ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿಲ್ಲ ಎಂದು ಹೇಳುತ್ತಿಲ್ಲ. ಅಕ್ರಮ ಆಗಿದೆ ಅಂತಲೇ ನಾವೂ ಹೇಳುತ್ತಿರುವುದು. ಅಕ್ರಮ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ. ವಾಲ್ಮೀಕಿ ನಿಗಮದ ಹಣ ವಸಂತನಗರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಡುತ್ತಿದ್ದರು. ಸಾಮಾನ್ಯವಾಗಿ ಹಣಕಾಸು ವ್ಯವಹಾರ ನಿಭಾಯಿಸುವುದು ಡ್ರಾಯಿಂಗ್ ಅಂಡ್ ಡಿಸ್ಪರ್ಸಿಂಗ್ ಅಧಿಕಾರಿಯ ಜವಾಬ್ದಾರಿ. ಹೆಚ್ಚು ಜವಾಬ್ದಾರಿ ನಿಗಮದ ಎಂಡಿಯ ಮೇಲೆಯೇ ಇದೆ. ಸರ್ಕಾರಕ್ಕೂ ನಿಗಮದಲ್ಲಿ ನಡೆದಿರುವ ಅಕ್ರಮಕ್ಕೂ ಸಂಬಂಧ ಇಲ್ಲ ಎಂದು ಸರ್ಕಾರವನ್ನು ಸಿಎಂ ಸಮರ್ಥಿಸಿದ್ದಾರೆ. ಬೊಮ್ಮಾಯಿ‌ ಸಿಎಂ ಆಗಿದ್ದಾಗ 87 ಕೋಟಿಗೂ‌ ಅಧಿಕ ಹಣ ಅವ್ಯಹಾರ ಆಯಿತು. ಯಾರು ರಾಜೀನಾಮೆ ಕೊಟ್ರು? ಬೊಮ್ಮಾಯಿ ಕೊಟ್ರಾ? ಎಪಿಎಂಸಿ‌ 46.18 ಕೋಟಿ ರೂ. ಲೂಟಿ‌ ಆಯ್ತು. ಆಗ ಯಡಿಯೂರಪ್ಪ ಸಿಎಂ ಆಗಿದ್ರು. ಅವರು‌ ರಾಜೀನಾಮೆ ಕೊಟ್ರಾ? ಎಂದು ಸಿಎಂ ಇದೇ ವೇಳೆ ಪ್ರಶ್ನಿಸಿದ್ದಾರೆ. ಇನ್ನು ಹಗರಣದ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದೂ ಸಹ ಬಿಜೆಪಿ ಶಾಸಕರು ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT