ಬೆಂಗಳೂರು: ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ರೂ.5 ಲಕ್ಷ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 26 ರಿಂದ ಆಗಸ್ಟ್ 11ರ ವರೆಗೆ ಪ್ಯಾರೀಸ್ ನಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕುಮಾರಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಕುಮಾರಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ ನಲ್ಲಿ ಕುಮಾರಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು ಅವರ ಮನವಿಗೆ ಸ್ಪಂದಿಸಿ ಈ ಘೋಷಣೆ ಮಾಡಲಾಗಿದೆ. ನಾಡಿನ ಕ್ರೀಡಾಪಟುಗಳು ಸೇರಿದಂತೆ ಭಾರತದ ಎಲ್ಲಾ ಕ್ರೀಡಾಳುಗಳು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಅಮೋಘ ಸಾಧನೆಗೈದು ಭಾರತದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದಿದ್ದಾರೆ.