ಮೈಸೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವೇತನ ಹೆಚ್ಚಳ ಮಾಡದೆ, ಪಿಂಚಣಿ ಜಾರಿಗೊಳಿಸಲು ವಿಫಲವಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯ್ ಭಾಸ್ಕರ್ ಹೇಳಿದರು.
ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಭಾನುವಾರ ಆಯೋಜಿಸಿದ್ದ ಎರಡನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಜಯಭಾಸ್ಕರ್, ಕಳೆದ ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಕ್ಕುಗಳಿಗಾಗಿ ಸಂಘಟನೆ ಹೋರಾಟ ನಡೆಸುತ್ತಿದೆ. ''ಕಡಿಮೆ ವೇತನದಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗೌರವಯುತವಾಗಿ ಜೀವನ ಸಾಗಿಸಲು ಪರದಾಡುತ್ತಿದ್ದಾರೆ ಎಂದರು.
ಸರ್ಕಾರಿ ನೌಕರರ ವೇತನ ಹೆಚ್ಚಿಸಿರುವ ಸಿಎಂ ಸಿದ್ದರಾಮಯ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವೇತನ ಮತ್ತು ಗ್ರಾಚ್ಯುಟಿಯನ್ನು ಹೆಚ್ಚಿಸಬೇಕು, ಸರ್ಕಾರ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತರು, ಕಟ್ಟಡ, ಕಾರ್ಖಾನೆ ಕಾರ್ಮಿಕರು ಮತ್ತಿತರ ಸಂಘಟನೆಗಳ ಬೆಂಬಲದೊಂದಿಗೆ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮೈಸೂರು ಅರಮನೆ ಬಳಿಯ ಗನ್ ಹೌಸ್‌ನಿಂದ ಕೆಆರ್ ವನಂನಲ್ಲಿರುವ ಅರಸು ಮಂಡಳಿವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.