ಬೆಂಗಳೂರು: ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಆದ ಡಾ. ನೀರಜ್ ಪಾಟೀಲ್, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ (NEC) ಆಯ್ಕೆಯಾಗಿದ್ದಾರೆ.
ಈ ವಿಷಯವನ್ನು ಲೇಬರ್ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾದ ಡೇವಿಡ್ ಇವಾನ್ಸ್, 15ನೇ ಜುಲೈ 2024ರಂದು ಪ್ರಕಟಿಸಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಂಗಳವಾರ ನಡೆಯಲಿದ್ದು ಸಭೆಯಲ್ಲಿ ನೀರಜ್ ಪಾಟೀಲ್ ಭಾಗವಹಿಸಲಿದ್ದಾರೆ.
39 ಸದಸ್ಯರ ನೀತಿ ನಿರೂಪಣಾ ಸಂಸ್ಥೆಯ ಮೊದಲ ಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಉಪ ಪ್ರಧಾನಿ ಏಂಜೆಲಾ ರೇನರ್ ಕೂಡ ಭಾಗವಹಿಸಲಿದ್ದಾರೆ. NEC ಅನೇಕ ಸಂಸದರು ಮತ್ತು ಇತರ ಪ್ರಮುಖ ಲೇಬರ್ ಪಕ್ಷದ ಸದಸ್ಯರನ್ನು ಹೊಂದಿದ್ದು ಮತದಾರರ ಬೆಂಬಲವನ್ನು ಕಾಪಾಡಿಕೊಳ್ಳುವುದು, ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು, ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ಕಾರ್ಯತಂತ್ರಗಳ ರೂಪಿಸುವುದು ಸಮಿತಿಯ ಕಾರ್ಯವಾಗಿದೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.
ಈ ಗೌರವಕ್ಕೆ ನಾನು ಆಯ್ಕೆಯಾಗುತ್ತೇನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಬ್ರಿಟನ್ ನಲ್ಲಿ ಭಾರತೀಯ ಮೂಲದ ಸುಮಾರು 17 ಲಕ್ಷ ಮತದಾರರಿದ್ದು, ಚುನಾವಣೆ ವೇಳೆ ಅವರೆಲ್ಲರ ಸಂಪರ್ಕಿಸಿ, ಬೆಂಬಲ ಬೇಡುವುದು ಅತ್ಯಂತ ಕಠಿಣ ಕೆಲಸವಾಗಿದ್ದು, ಮಾಜಿ ಪ್ರಧಾನಿ ರಿಷಿ ಸುನಕ್ ಗೆ ಅನೇಕ ಸಂಪ್ರದಾಯಿತ ಮತಗಳಿದ್ದವು. 6 ವಾರಗಳ ಸುದೀರ್ಘ ಕಠಿಣ ಪರಿಶ್ರಮದ ಬಳಿಕ ಜನರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದೆವು. ನಮ್ಮ ಪಕ್ಷ 412 ಸ್ಥಾನಗಳನ್ನು ಗೆದ್ದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಎನ್‌ಎಚ್‌ಎಸ್‌ನಲ್ಲಿ 28 ವರ್ಷಗಳ ಸೇವೆಯೊಂದಿಗೆ ಅಪಘಾತ ಮತ್ತು ತುರ್ತು ವೈದ್ಯಕೀಯ ಸಲಹೆಗಾರರಾದ ಡಾ. ನೀರಜ್ ಪಾಟೀಲ್ ಕಳೆದ 20 ವರ್ಷಗಳಿಂದ ಕಾರ್ಮಿಕ ಪಕ್ಷದ ಸದಸ್ಯರಾಗಿದ್ದಾರೆ. ಸೇಂಟ್ ಥಾಮಸ್ ಆಸ್ಪತ್ರೆ ಮತ್ತು ಕಿಂಗ್ಸ್ ಕಾಲೇಜು ಆಸ್ಪತ್ರೆಯ ಫೌಂಡೇಶನ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಲಂಡನ್ ಥೇಮ್ಸ್ ನದಿ ದಡದಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಲು ನೀರಜ್ ಪಾಟೀಲ್ ಪ್ರಮುಖ ಕಾರಣವಾಗಿದ್ದರು. ಈ ಪ್ರತಿಮೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಕೊರೋನಾ ಸೋಂಕು ತಗುಲಿದ ಮೇಲೆ ಭಾವನಾತ್ಮಕ ಪತ್ರ ಬರೆದು ಜಗತ್ತಿನ ಗಮನ ಸೆಳೆದಿದ್ದರು.
ಇಂಗ್ಲೆಂಡ್‌ನ ಲ್ಯಾಂಬೆತ್ ನಗರದಲ್ಲಿ ಮೇಯರ್ ಆಗಿ ನೀರಜ್ ಪಾಟೀಲ್ ಕಾರ್ಯನಿರ್ವಹಿಸಿದ್ದಾರೆ. ನೀರಜ್ ಪಾಟೀಲ್ ಎಂಟು ವರ್ಷಗಳ ಕಾಲ ಲ್ಯಾಂಬೆತ್ ಕೌನ್ಸಿಲ್ನಲ್ಲಿ ಸೇವೆ ಸಲ್ಲಿಸಿದ್ದರು.