ಬೆಂಗಳೂರು: ಈ ಬಾರಿ ಸುರಿದ ಭಾರಿ ಮಳೆಗೆ ಘಟ್ಟಪ್ರದೇಶ ವಿಶೇಷವಾಗಿ ಕರಾವಳಿ ಭಾಗಗಳ ಹಲವೆಡೆ ಭಾರೀ ಹಾನಿ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಶಾಸಕ ಹರೀಶ್ ಪೂಂಜಾ ಸೇರಿ ಬಿಜೆಪಿ ಸದಸ್ಯರು ಸೋಮವಾರ ಆಗ್ರಹಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆ ಈ ಬಗ್ಗೆ ಮಾತನಾಡಿದ ಹರೀಶ್ ಪೂಂಜಾ ಅವರು, ಮಳೆ ಅವಾಂತರದಿಂದ ಹಲವೆಡೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ, ನೆರೆಹಾವಳಿಗೆ ತುತ್ತಾದ ಕೊಡಗಿಗೆ, ಉತ್ತರ ಕರ್ನಾಟಕಕ್ಕೆ ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕರಾವಳಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅನಾಹುತ ಸಂಭವಿಸಿದಾಗ ಅಂದಿನ ಬಿಜೆಪಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿತ್ತು ಎಂದು ತಿಳಿಸಿದರು. ಇನ್ನು ಶಾಸಕ ಹರೀಶ್ ಪೂಂಜಾ ಅವರ ಮಾತಿಗೆ ಸುನಿಲ್ ಕುಮಾರ್, ವಿಪಕ್ಷ ನಾಯಕ ಆರ್ ಅಶೋಕ್ ದನಿಗೂಡಿಸಿದರು.
ಈ ಪ್ರದೇಶದಲ್ಲಿ ಸರ್ಕಾರ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳುವ ಮೊದಲು ರಸ್ತೆಗಳನ್ನು ಮೋಟಾರು ಮಾಡುವಂತೆ ಮಾಡುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು. ಮಳೆಗಾಲದ ನಂತರ ಈ ಬಗ್ಗೆ ಪರಿಶೀಲಿಸುವುದಾಗಿ ಜಾರಕಿಹೊಳಿ ಭರವಸೆ ನೀಡಿದರು.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶಾಸಕ ಹರೀಶ್ ಪೂಂಜಾ ಅವರ ಹೇಳಿಕೆಯನ್ನು ಹಂಚಿಕೊಂಡಿರುವ ಬಿಜೆಪಿ, ನಮ್ಮ ಸರ್ಕಾರವಿದ್ದಾಗ ಪ್ರವಾಹ ಸಂಭವಿಸಿದರೆ ಆಯಾ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡುತ್ತು. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ವಿಪಕ್ಷದ ಶಾಸಕರಿಗೂ ಅನುದಾನ ನೀಡಿದ್ದರು. ಆದರೆ, ಈ ಸರ್ಕಾರದಲ್ಲಿ ವಿಪಕ್ಷವಿರಲಿ, ಆಡಳಿತ ಪಕ್ಷದ ಶಾಸಕರಿಗೂ ಅನುದಾನ ನೀಡುತ್ತಿಲ್ಲ ಎಂದು ಪೋಸ್ಟ್ ಮಾಡಿದೆ.