ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ನಲ್ಲಿ ನಡೆದ ಬಹುಕೋಟಿ ಹಗರಣದ ಹಿಂದೆ ಯಾರೇ ಇದ್ದರೂ ಅವರನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೊಂದಲದ ನಡುವೆಯೇ ಉತ್ತರಿಸಿದರು.
ಪ್ರತಿಪಕ್ಷಗಳ ಪ್ರತಿಭಟನೆ, ಘೋಷಣೆ, ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಪದೇ ಪದೇ ವಾಗ್ವಾದದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮಗಳ ಕುರಿತು ನಡೆದ ಚರ್ಚೆಗೆ ಉತ್ತರಿಸಲು ಆಗದೇ, ಲಿಖಿತ ಭಾಷಣವನ್ನೂ ಸಹ ಓದಲು ಆಗದೇ ಕೊನೆಗೆ ಲಿಖಿತ ಭಾಷಣವನ್ನು ಸದನದಲ್ಲಿ ಮಂಡಿಸಿದರು.
ಪ್ರಶೋತ್ತರ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕುರಿತು ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು.
ಮೇಲ್ಮನೆಯ ಸುಮಾರು 15 ಸದಸ್ಯರು ಏಳು ಗಂಟೆಗಳ ಕಾಲ ಈ ವಿಷಯದ ಬಗ್ಗೆ ಚರ್ಚೆ ನಡೆಸಿದರು. ತಮ್ಮ ಉತ್ತರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ನನಗೆ ಅಪಖ್ಯಾತಿ ತರುವುದು ಬಿಜೆಪಿ ಪಕ್ಷದ ಏಕೈಕ ಉದ್ದೇಶವಾಗಿದೆ. ಅಕ್ರಮಗಳಲ್ಲಿ ಸರ್ಕಾರ, ಹಣಕಾಸು ಇಲಾಖೆ ಅಥವಾ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪಾಲಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ನಾನು ಹೇಳುವುದಿಲ್ಲ. ತನಿಖೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ,'' ಎಂದರು.
ಸಿಎಂ ಉತ್ತರದ ವೇಳೆ ಬಿಜೆಪಿ ಸದಸ್ಯರು ಮಧ್ಯಪ್ರವೇಶಿಸಿದ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಿಎಂಗೆ ಮಾತನಾಡಲು ಅವಕಾಶ ನೀಡದ ವಿಪಕ್ಷ ಸದಸ್ಯರನ್ನು ಹೊರ ಹಾಕುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಒತ್ತಾಯಿಸಿದರು. ಇದರಿಂದ ಕೆರಳಿದ ಬಿಜೆಪಿ ಎಂಎಲ್‌ಸಿಗಳು, ಸರ್ಕಾರವನ್ನು ಪ್ರಶ್ನಿಸಲು ಪ್ರತಿಪಕ್ಷವಿದೆ ಎಂದು ವಾಗ್ದಾಳಿ ನಡೆಸಿದರು.
ಬಳಿಕ ತಮ್ಮ ಭಾಷಣವನ್ನು ಮುಂದುವರಿಸಿದ ಸಿದ್ದರಾಮಯ್ಯ, ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ಹಣ ಹಂಚಿಕೆಯನ್ನು ಕಡಿತಗೊಳಿಸಿದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಮುದಾಯಗಳು ರಾಜ್ಯದ ಜನಸಂಖ್ಯೆಯ ಶೇಕಡಾ 24.10 ರಷ್ಟಿದೆ ಮತ್ತು 2017-18 ರ ಬಜೆಟ್‌ನಲ್ಲಿ ಈ ಸಮುದಾಯಗಳ ಕಲ್ಯಾಣಕ್ಕಾಗಿ 29,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ, ನಂತರ ಈ ಅನುದಾವನ್ನು ಜೆಡಿಎಸ್ ಮತ್ತು ಬಿಜೆಪಿ ಕಡಿತಗೊಳಿಸಿದ್ದವು.
ಈ ವರ್ಷ ನಮ್ಮ ಸರ್ಕಾರ ಈ ಸಮುದಾಯಗಳ ಕಲ್ಯಾಣಕ್ಕಾಗಿ 39,121 ಕೋಟಿ ರೂ ಮೀಸಲಟ್ಟಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಮತ್ತು ಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತಂದದ್ದು ನಮ್ಮ ಸರ್ಕಾರ. ಈ ಸಮುದಾಯಗಳ ಕಲ್ಯಾಣಕ್ಕಾಗಿ ಬಿಜೆಪಿ ಏನನ್ನೂ ಮಾಡಿಲ್ಲ. ಸಮಾಜದ ದೀನದಲಿತ ವರ್ಗಗಳ ಉನ್ನತಿಗೆ ಕಾಂಗ್ರೆಸ್‌ನ ಬದ್ಧತೆಯನ್ನು ಪ್ರಶ್ನಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದರು.
ಇದೇ ವೇಳೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿದ್ದೇವೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸುವಾಗ ಬಿಜೆಪಿಯ ಎನ್.ರವಿಕುಮಾರ್ ಅವರುಹಲವಾರು ಬಾರಿ ಎದ್ದು ನಿಂತು ಮಾತನಾಡತೊಡಗಿದರು.
ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಆಹಮದ್ ಅವರು, ರವಿಕುಮಾರ್ ಅವರನ್ನು ಸದನದಿಂದ ಹೊರಗೆ ಹಾಕಿ ಎಂದರು. ಈ ಮಾತಿನಿಂದ ಕೆರಳಿದ ಪ್ರತಿಪಕ್ಷ ಸದಸ್ಯರು, ಸದನದಿಂದ ಹೊರಗೆ ಹಾಕುವಂತೆ ಹೇಳಲು ನೀವ್ಯಾರು ಎಂದು ವಾಗ್ವಾದಕ್ಕೆ ಇಳಿದರು.
ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ಉತ್ತರದ ನಂತರ ಎಲ್ಲರಿಗೂ ಪ್ರಶ್ನೆ ಕೇಳಲು ಅವಕಾಶ ಕೊಡುವುದಾಗಿ ಹತ್ತಾರು ಬಾರಿ ಹೇಳಿದರು. ನಂತರ ಮಾತು ಸಿದ್ದರಾಮಯ್ಯ ಮುಂದುವರಿಸುತ್ತಿದ್ದಂತೆ ಬಿಜೆಪಿಯ ಎನ್. ರವಿಕುಮಾರ್ ಪುನಃ ಮಾತನಾಡಲು ಅವಕಾಶ ನೀಡುವಂತೆ ಕೋರತೊಡಗಿದರು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ಪದೇ ಪದೆ ಈ ರೀತಿ ಅಡ್ಡಿ ಪಡಿಸಿದರೆ ನಿಮಗೆ (ಸಭಾಪತಿ) ಅಧಿಕಾರವಿದೆ. ಸಚೇತಕರು ಮೂವ್ ಮಾಡಿದರೆ ಅಮಾನತು ಮಾಡಬಹುದು, ನಮ್ಮ ಕಡೆಯವರು ಏಳಬೇಡಿ, ವಿರೋಧಪಕ್ಷದವರು ಎದ್ದರೆ ಕೂರಬೇಡಿ, ತಾಳ್ಮೆಗೂ ಒಂದು ಮಿತಿ ಇದೆ ಎಂದು ಕೊಂಚ ಸಿಟ್ಟಿನಿಂದಲೇ ಹೇಳಿದರು.
ಸಭಾಪತಿಯ ಅನುಮತಿಯ ಮೇರೆಗೆ ಬಿಜೆಪಿಯ ಸಿ.ಟಿ. ರವಿ ಮಾತನಾಡಿ ನಮ್ಮ ಸಂಶಯ, ಪ್ರಶ್ನೆಗಳಿಗೆ ಅವರು ಉತ್ತರ ಕೊಡಬೇಕು, ಅದು ಅವರ ಕರ್ತವ್ಯ, ಸುಮ್ಮನೇ ಏನೂ ಹೇಳಲು ಆಗುವುದಿಲ್ಲ. ಪ್ರಜಾಪ್ರಭುತ್ವ ಜಬರ್‌ದಸ್ತಿ ಮೇಲೆ ನಡೆಯಲ್ಲ, ಮಾತನಾಡಲು ಅನುಮತಿ ಕೊಟ್ಟ ಮೇಲೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಈ ಮಾತಿನಿಂದ ಪುನಃ ಉಭಯ ಕಡೆಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಸಭಾಪತಿ ಹೊರಟ್ಟಿ ಸಿಟ್ಟಿನಿಂದ ಇದೇ ರೀತಿ ಸದಸ್ಯರು ನಡೆದುಕೊಂಡರೆ ಸದನದಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಮಧ್ಯೆ, ಮುಖ್ಯಮಂತ್ರಿಗಳು ಭಾಷಣದ ಬದಲು ಲಿಖಿತ ಉತ್ತರ ಓದತೊಡಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸಭಾಪತಿಗಳ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆ ಕೆಲ ನಿಮಿಷ ಲಿಖಿತ ಉತ್ತರ ಓದಿದರು. ಕೊನೆಗೆ ಸಭಾಪತಿಗಳು ದಿಢೀರೆಂದು ಉತ್ತರವನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿ ಸದನವನ್ನು ಮುಂದೂಡಿದರು