ಗೋಕಾಕ್: ನಿಯಂತ್ರಣ ಕಳೆದುಕೊಂಡ ಶಾಲಾ ಬಸ್ ವೊಂದು ಪಲ್ಟಿಯಾಗಿ ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿರುವ ಗೋಕಾಕ್ ತಾಲ್ಲೂಕಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ತಾಲೂಕಿನ ಮೇಲಮಟ್ಟಿ ಗ್ರಾಮದ ಗೋಕಾಕ-ಪಾಚಾಪುರ ರಸ್ತೆಯಲ್ಲಿ ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.
20 ವಿದ್ಯಾರ್ಥಿಗಳ ಪೈಕಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಇತರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರೆಲ್ಲರೂ ಮರಡಿಮಠದ ಜೈ ಹನುಮಾನ್ ಸಂಜೀವ್ ನಾಯಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ಶಾಲಾ ಬಸ್ ಅವರನ್ನು ಮಾವನೂರು, ಗೊಡಚಿನಮಲ್ಕಿ, ಮೇಲಮಟ್ಟಿಯಿಂದ ಕರೆದುಕೊಂಡು ಬಂದಿತ್ತು. ಹಳ್ಳಿಗಳಿಂದ ಶಾಲೆಗೆ ಮಕ್ಕಳನ್ನು ಡ್ರಾಪ್ ಮಾಡುತ್ತಿದ್ದಾಗ ಅಪಘಾತ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಗೋಕಾಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನ ಸ್ಟೀರಿಂಗ್ ಅನಿರೀಕ್ಷಿತವಾಗಿ ಲಾಕ್ ಆಗಿದ್ದರಿಂದ ಬಸ್ ನಿಯಂತ್ರಣ ತಪ್ಪಿದೆ ಎಂದು ಚಾಲಕ ಹೇಳಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.