ರಾಮನಗರ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಗ್ಗೆ ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯಿತು. ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿ ಭಾಷಣ ಮಾಡುತ್ತಿದ್ದ ವೇಳೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ನಟ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ ಪ್ರದರ್ಶಿಸಿ ಡಿ ಬಾಸ್, ಡಿ ಬಾಸ್ ಎಂದು ಕೂಗಲು ಆರಂಭಿಸಿದರು.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಅವರು ನನ್ನನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ, ಅವರು ನಾಳೆ(ಜುಲೈ 24) ನನ್ನನ್ನು ಭೇಟಿ ಮಾಡಿ ಮಾತನಾಡಲಿದ್ದು, ಎಲ್ಲ ವಿಚಾರ ತಿಳಿದುಕೊಳ್ಳುತ್ತೇನೆ, ಏನಾದರೂ ಅನ್ಯಾಯವಾಗಿದ್ದರೆ ಖಂಡಿತಾ ಸರಿಪಡಿಸಲು ಪ್ರಯತ್ನಿಸುವೆ ಎಂದರು.
ಉಪ ಮುಖ್ಯಮಂತ್ರಿಗಳಿಂದ ಈ ಮಾತುಗಳನ್ನು ಕೇಳುತ್ತಿದ್ದಂತೆ ದರ್ಶನ್ ಅಭಿಮಾನಿಗಳಿಗೆ ಭಾರೀ ಖುಷಿಯಾಗಿದ್ದು, ಮತ್ತೆ ಮತ್ತೆ ಡಿ ಬಾಸ್ ಗೆ ಜೈ ಡಿ ಬಾಸ್ ಗೆ ಜೈ ಎಂದು ಜೈಕಾರ ಹಾಕಿದರು. ಡಿ ಕೆ ಶಿವಕುಮಾರ್ ಮಾತುಗಳನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಾಕಿ ಸಂಭ್ರಮಿಸುತ್ತಿದ್ದಾರೆ.
ಕಾನೂನು ಗೌರವಿಸಬೇಕು: ಈ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ಜೊತೆ ಮಾತನಾಡುತ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ನಾವೆಲ್ಲಾ ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದರು.
ವಿಧಾನ ಮಂಡಲ ಅಧಿವೇಶನ ಇದ್ದ ಕಾರಣ ಚಾಮುಂಡೇಶ್ವರಿ ಕರಗ ಮಹೋತ್ಸವ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತಕೊಟ್ಟು ಇಕ್ಬಾಲ್ ಅವರನ್ನು ಗೆಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮ ಸೇವೆ ಮಾಡಲು, ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದೀರಿ. ಡಿಕೆ ಸುರೇಶ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿ ನಾನು ನಿಮ್ಮ ಸೇವೆಗೆ ಶ್ರಮಿಸುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದರು.
ಏನಿದು ಪ್ರಕರಣ?: ನಟ ದರ್ಶನ್ ಗೆಳತಿ ಪವಿತ್ರಾಗೌಡ ಅವರಿಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾರೆಂದು ಸಿಟ್ಟಿನಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿ ತಂದು ಶೆಡ್ ನಲ್ಲಿ ಕೂಡಿ ಹಾಕಿ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಕಾರಾಗೃಹ ಸೆರೆವಾಸ ಅನುಭವಿಸುತ್ತಿದ್ದಾರೆ.
ಪ್ರಾಥಮಿಕ ಚಾರ್ಚ್ ಶೀಟ್ ಸಲ್ಲಿಕೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲಾ ಆಯಾಮಗಳಿಂದ ಮಾಹಿತಿ ಕಲೆ ಹಾಕುತ್ತಿದ್ದು, ಇನ್ನು 15 ದಿನಗಳಲ್ಲಿ ಪ್ರಾಥಮಿಕ ಚಾರ್ಚ್ ಶೀಟ್ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.