ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣವನ್ನು ಇನ್ನು 10 ದಿನಗಳ ಒಳಗಾಗಿ ಖಾತೆಗೆ ಹಾಕಲಾಗುತ್ತದೆ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಮೇ ತಿಂಗಳಲ್ಲಿ ಖಾತೆಗೆ ಹಣ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ 2 ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ ಡಿಬಿಟಿ ತಾಂತ್ರಿಕ ಕಾರ್ಯಗಳು ನಡೆಯುತ್ತಿವೆ. ಇನ್ನು 8 ರಿಂದ 10 ದಿನಗಳಲ್ಲಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತವಿಲ್ಲ
ಇದೇ ವೇಳೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂಬ ಊಹಾಪೋಹಗಳಿಗೂ ತೆರೆ ಎಳೆದಿರುವ ಸಚಿವರು, ಯಾವುದೇ ಕಾರಣಕ್ಕೂ ಯೋಜನೆ ಸ್ಧಗಿತ ಮಾಡುವುದಿಲ್ಲ. ಇದು ರಾಜ್ಯದ ಮಹಿಳೆಯರ ಅರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಾವು ಎಲ್ಲ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.