ಬೆಂಗಳೂರು: ಚಾರ್ಜ್ ಆಗುತ್ತಿದ್ದ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ತೆಗೆಯುವ ವೇಳೆ ಸ್ಫೋಟ ಸಂಭವಿಸಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ಜನತಾ ಕಾಲೋನಿಯಲ್ಲಿರುವ ಕೆಂಪಣ್ಣ ರೆಡ್ಡಿ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಗುರುವಾರ ನಡೆದಿದೆ.
ರಾಹುಲ್ ಹೋಮ್ ಅಪ್ಲೈಯನ್ಸ್‌ನಲ್ಲಿ ಗುರುವಾರ ರಾತ್ರಿ 10.55ರ ಸುಮಾರಿಗೆ ಘಟನೆ ನಡೆದಿದ್ದು, ರಾಹುಲ್ ದಾಸ್ (26) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಫೋಟದ ಪರಿಣಾಮ ಅಕ್ಕಪಕ್ಕದ ಕಟ್ಟಡಗಳ ಕಿಟಕಿ, ಬಾಗಿಲುಗಳು ಹಾಗೂ ಪೀಠೋಪರಣಗಳು ಹಾನಿಗೊಳಗಾಗಿವೆ. ಸ್ಫೋಟದ ಶಬ್ಧ ಸುಮಾರು 1 ಕಿ.ಮೀವರೆಗೂ ಕೇಳಿ ಬಂದಿತ್ತು ಎನ್ನಲಾಗಿದೆ.
ರಾಹುಲ್ ಹೋಮ್ ಅಪ್ಲೈಯನ್ಸ್ ಮಾಲೀಕ ಸುರೇಶ್ ದಾಸ್ ಅಂಗಡಿಯ ಶೆಟರ್ ಎಳೆದು ಮನೆಗೆ ತೆರಳಿದ್ದರು. ಬಳಿಕ ಇವರ ಪುತ್ರ ರಾಹುಲ್ ಚಾರ್ಚ್ ಗೆ ಹಾಕಿದ್ದ ಬ್ಯಾಟರಿ ತೆಗೆಯಲು ಅಂಗಡಿಗೆ ಬಂದಿದ್ದಾನೆ. ಬ್ಯಾಟರಿ ತೆಗೆಯುವಾಗ ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು, ಇದರಿಂದ ಸ್ಫೋಟ ಸಂಭವಿಸಿದೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಂಕಿನಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ನಡುವೆ ಅಂಗಡಿಯೊಳಗೆ ಮಿನಿ ಗ್ಯಾಸ್ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸಲಾಗುತ್ತಿದ್ದು, ಈ ಗ್ಯಾಸ್ ಅಂಗಡಿಯಲ್ಲಿ ಹರಡಿದ್ದು, ಬ್ಯಾಟರಿ ತೆಗೆಯುವಾಗ ಬೆಂಕಿ ಕಿಡಿ ಬಂದು ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಆದರೆ, ಈ ಆರೋಪವನ್ನು ಅಂಗಡಿ ಮಾಲೀಕ ಸುರೇಶ್ ದಾಲ್ ಅವರ ಕುಟುಂಬಸ್ಥರು ಅವರು ನಿರಾಕರಿಸಿದ್ದಾರೆ. ನನ್ನ ಸಹೋದರ ಸುರೇಶ್ 24 ವರ್ಷಗಳಿಂದ ಅಂಗಡಿಯನ್ನು ನಡೆಸುತ್ತಿದ್ದಾರೆ. ಬ್ಯಾಟರಿ ತೆಗೆಯುವಾಗ ಸ್ಫೋಟ ಸಂಭವಿಸಿದ್ದು, ಇದರಿಂದಲೇ ರಾಹುಲ್‌ಗೆ ಗಂಭೀರ ಗಾಯಗಳಾಗಿವೆ. ಸಹೋದರ ಇದೀಗ ಪೊಲೀಸ್ ಠಾಣೆಯಲ್ಲಿದ್ದಾರೆಂದು ಕಿಶನ್ ದಾಸ್ ಹೇಳಿದ್ದಾರೆ.