ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಜೈಲುಪಾರಾಗಿರುವ ನಟ ದರ್ಶನ್ ಇದೀಗ ಮನೆಯೂಟ, ಹಾಸಿಗೆ ಮತ್ತು ಪುಸ್ತಕ ಪೂರೈಕೆಗೆ ಅನುಮತಿಸಲು ಜೈಲಧಿಕಾರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ದರ್ಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಹೈಕೋರ್ಟ್ ನಿರ್ದೇಶನದಂತೆ ಮನೆ ಊಟ ಪೂರೈಸಲು ಜೈಲು ಅಧಿಕಾರಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಹಿಂಪಡೆಯಲು ಮೆಮೊ ಸಲ್ಲಿಸಿದ್ದೇವೆ. ಹೊಸ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ಈ ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ಪೀಠವು ಅರ್ಜಿ ಹಿಂಪಡೆಯಲು ಅನುಮತಿ ನೀಡಿದೆ.
ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ, ಮನೆ ಊಟ ಪಡೆಯಲು ಇಷ್ಟೆಲ್ಲಾ ಮಾಡಬೇಕಾ? ಇದರಲ್ಲೇನಿದೆ? ಶುಚಿಯಾದ ಆಹಾರ ಪಡೆಯುವುದು ಮೂಲಭೂತ ಹಕ್ಕು. ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಕರಣವೊಂದರಲ್ಲಿ ಅಡ್ವೊಕೇಟ್ ಜನರಲ್ ಮನೆ ಊಟ ಪಡೆಯುವುದಕ್ಕೆ ಸಹಮತಿಸಿದ್ದಾರೆ ಎಂದು ನ್ಯಾಯಪೀಠ ತಿಳಿಸಿತ್ತು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು, ಮನೆಯೂಟಕ್ಕೆ ನಾವು ವಿರೋಧಿಸುತ್ತಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೆ ಕೊಡಬಹುದು ಎಂದಷ್ಟೇ ಹೇಳಿದ್ದೇವೆ ಎಂದು ಸಮಜಾಯಿಷಿ ನೀಡಿದರು.
ಈ ಹಿಂದೆ ಹೈಕೋರ್ಟ್ ನಿರ್ದೇಶನದಂತೆ ದರ್ಶನ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯವು, ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ-201ರ ಅಧಿನಿಯಮ 728ರ ಪ್ರಕಾರ ಕೊಲೆ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ನ್ಯಾಯಾಂಗ ಬಂಧನದಲ್ಲಿರು ಇತರೆ ವಿಚಾರಣಾಧೀನ ಕೈದಿಗಳು ಸ್ವಂತ ಖರ್ಚಿನಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್, ತಟ್ಟೆ ಹಾಗೂ ಕಪ್ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿರುತ್ತದೆ. ಅದರಂತೆ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಮನೆಯಿಂದ ಊಟ, ಬಟ್ಟೆ ಹಾಗೂ ಹಾಸಿಗೆ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ ಎಂದು ಹೇಳಿತ್ತು.