ಮೈಸೂರು: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಲಘು ವಿಶ್ರಾಂತಿ ಪಡೆಯಲೆಂದು ಹೋಗಿದ್ದಾಗ ಸರ್ಕಾರಿ ಅತಿಥಿ ಗೃಹದ ಬಾಗಿಲು ಹಾಕಿದ್ದ ಘಟನೆ ಭಾನುವಾರ ನಡೆದಿದೆ. ಇದರಿಂದ ಸಚಿವರು ಮುಜುಗರ ಅನುಭವಿಸಿದರು.
ಬೆಳಗ್ಗೆ ಇಲ್ಲಿನ ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಪಡೆದು ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಾಕ್ ಕಾದಿತ್ತು. ವಿಶ್ರಾಂತಿ ಪಡೆಯಲು ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಕ್ಕೆ ಆಗಮಿಸಿದಾಗ ಬೀಗ ಜಡಿಯಲಾಗಿತ್ತು. ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಅವರು ಬಂದಿದ್ದರು. ಅತಿಥಿ ಗೃಹದಲ್ಲಿ ಕೊಂಚ ಸಮಯ ವಿಶ್ರಾಂತಿ ಪಡೆಯಲು ಬಯಸಿದ್ದರು. ಅಲ್ಲಿಗೆ ಹೋದಾಗ ಬೀಗ ಹಾಕಿರುವುದು ಕಂಡುಬಂತು. ಸ್ವಲ್ಪ ಹೊತ್ತು ಕಾದರೂ ಸಿಬ್ಬಂದಿ ಯಾರೂ ಬರಲಿಲ್ಲ. ಇದರಿಂದಾಗಿ ಅವರು ಅಲ್ಲಿಂದ ಮರಳಿದರು.
ಈ ಮೂಲಕ ಸರ್ಕಾರವು ಕೇಂದ್ರ ಸಚಿವರಿಗೆ ಅವಮಾನ ಮಾಡಿದೆ. ಪ್ರವಾಸ ಕಾರ್ಯಕ್ರಮದ ಪಟ್ಟಿಯನ್ನು ಮುಂಚಿತವಾಗಿಯೇ ಅಧಿಕಾರಿಗಳಿಗೆ ತಿಳಿಸಿದ್ದರೂ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಶಿಷ್ಟಾಚಾರ ಪಾಲಿಸಿಲ್ಲ. ಅವರು ಅತಿಥಿ ಗೃಹದ ಬಳಿಗೆ ಬಂದಾಗಲೂ ಸರ್ಕಾರಿ ಅಧಿಕಾರಿಗಳ್ಯಾರೂ ಇರಲಿಲ್ಲ ಎಂದು ಜೆಡಿಎಸ್ ಮುಖಂಡರು ದೂರಿದರು.
ಈ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳನ್ನು ಕೇಳಿದಾಗ ಅಧಿಕಾರಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಸುಮಾರು 15 ನಿಮಿಷ ಅಲ್ಲಿ ಕಾದರೂ ಯಾರೂ ಬರದಿದ್ದಾಗ ಎಚ್‌ಡಿಕೆ ಬೇಸರಿದಂದಲೇ ಮೈಸೂರಿಗೆ ತೆರಳಿದರು.
ಬೆಳಗ್ಗೆ 9.30ರ ಸುಮಾರಿಗೆ ಮೈಸೂರು ಹೊರವಲಯದ ಬೋಗಾದಿ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕುಮಾರಸ್ವಾಮಿ ಅಲ್ಲಿಂದ ತೆರಳಿದರು. ತನಿಖೆಗೆ ಆದೇಶಿಸಿರುವ ಜಿಲ್ಲಾಧಿಕಾರಿ ರೆಡ್ಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.