ಅಥಣಿ: ಪ್ರವಾಹ ಪೀಡಿತ ಪ್ರದೇಶಗಳ ಪುನರ್ವಸತಿ ಕೇಂದ್ರಗಳಿಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಭಾನುವಾರ ಭೇಟಿ ನೀಡಿ, ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ಇದೇ ವೇಳೆ ಸಚಿವರು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವ ಜನರಿಗೆ ಹೊದಿಕೆಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಉಚಿತ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಬಳಿಕ ಪ್ರವಾಹ ಪರಿಹಾರಕ್ಕೆ ಯಾವುದೇ ಸಹಾಯ ಬೇಕಾದರೆ ಕೇಳಲು ಹಿಂಜರಿಯದಿರಿ ಎಂದು ಜನರನ್ನು ಕೋರಿದರು. ಅಲ್ಲದೆ, ಈ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಹಾಗೂ ತಮ್ಮ ವೈಯಕ್ತಿಕ ಸೆಲ್ ಫೋನ್ ನಂಬರ್ ಗೆ ಕರೆ ಮಾಡಿ ಸಂಪರ್ಕಿಸುವಂತೆ ಜನರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ಕೆಲವು ದೋಣಿಗಳು ಅಗತ್ಯವಿದ್ದಲ್ಲಿ ಅವುಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಹೇಳಿದರು.
ಪ್ರವಾಹದ ಸಮಸ್ಯೆಯಲ್ಲಿ ಸಿಲುಕಿರುವ ನಿರ್ಗತಿಕರಿಗೆ ವೈಯಕ್ತಿಕ ಬೆಂಬಲದ ಮೂಲಕ ಬೇಕಾದ ಎಲ್ಲಾ ಸಹಾಯವನ್ನು ಮಾಡಲಾಗವುದು. ಅಲ್ಲದೆ, ಈ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದು, ತಾಲ್ಲೂಕಿನಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸಲಾಗುವುದು. ಆಂಬ್ಯುಲೆನ್ಸ್‌ಗಳಲ್ಲಿ ವೈದ್ಯರು, ನರ್ಸ್ ಮತ್ತು ಅಗತ್ಯ ಔಷಧಗಳು ಇರಲಿವೆ ಎಂದು ತಿಳಿಸಿದರು.
ಪ್ರತಿ ಪುನರ್ವಸತಿ ಕೇಂದ್ರದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ವೈದ್ಯಕೀಯ ತಂಡ ಇರಲಿದೆ. ಅಂಥವರಿಗೆ ಸರಕಾರದ ನಿಯಮಾನುಸಾರ ಗುಣಮಟ್ಟದ ಆಹಾರ ನೀಡಲಾಗುವುದು. ತಹಶೀಲ್ದಾರ್ ನೇತೃತ್ವದಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ಆಹಾರ ನಿರ್ವಹಣೆಯ ಮೇಲ್ವಿಚಾರಣೆಗಾಗಿ ವಿಶೇಷ ತಂಡವನ್ನು ಸ್ಥಾಪಿಸಲಾಗಿದೆೇ ಎಂದೂ ಇದೇ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಅಥಣಿಯಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ನೋಡಲ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ವಾಣಿ (ತಾಲೂಕು ಪಂಚಾಯಿತಿ ಅಧಿಕಾರಿ ಶಿವಾನಂದ ಕಲ್ಲಾಪುರ), ಕಂದಾಯ ಅಧಿಕಾರಿ ಶಿವಾನಂದ ನೆಂಶಿಂಗೆ ಮತ್ತಿತರರು ಉಪಸ್ಥಿತರಿದ್ದರು.