ಬೆಂಗಳೂರು: ಬನ್ನೇರುಘಟ್ಟ ಸಂರಕ್ಷಿತಾರಣ್ಯ ಪ್ರದೇಶದ ಸುತ್ತಮುತ್ತ ಮೂವರನ್ನು ಬಲಿ ಪಡೆದು ಸ್ಥಳೀಯರಿಗೆ ಸಿಂಹ್ವಸ್ವಪ್ನವಾಗಿದ್ದ ಕಾಡಾನೆ (Wild Elephant) ಮಕ್ನಾ ಅನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಸೋಮವಾರ ಬನ್ನೇರುಘಟ್ಟದ (Bannerughatta) ತಟ್ಟಗುಪ್ಪೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದಿದೆ. ಈ ಹಿಂದೆ ಇದೇ ಮಕ್ನಾ ಆನೆ ಅರಣ್ಯ ಸಿಬ್ಬಂದಿ ವಾಹನವನ್ನೇ ಹಿಂಬಾಲಿಸಿ ದಾಳಿಗೆ ಮುಂದಾಗಿತ್ತು.
ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. 10 ದಿನಗಳ ಹಿಂದೆ ಇದೇ ಮಕ್ನಾ ಆನೆ ಫಾರೆಸ್ಟ್ ವಾಚರ್ ಒಬ್ಬರನ್ನು ಕೊಂದು ಹಾಕಿತ್ತು.
ಕ್ಯಾಪ್ಟನ್ ಅಭಿಮನ್ಯು ಅನುಪಸ್ಥಿತಿಯಲ್ಲೂ ಯಶಸ್ವಿ ಕಾರ್ಯಾಚರಣೆ
ಇನ್ನು ಇಂದಿನ ಆನೆ ಸೆರೆ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆ ಗೈರಾಗಿತ್ತು. ಸಾಕಾನೆ ಭೀಮ, ಮಹೇಂದ್ರ ನೇತೃತ್ವದಲ್ಲಿ ಇಂದಿನ ಕಾರ್ಯಾಚರಣೆ ನಡೆದಿತ್ತು. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಡ್ರೋನ್ ಮೂಲಕ ಮಕ್ನಾ ಇರುವ ಸ್ಥಳ ಗುರುತಿಸಿದ್ದರು. ನಂತರ ಮಕ್ನಾ ಆನೆಯನ್ನು ಅರಣ್ಯ ಅಧಿಕಾರಿಗಳು, ಸಾಕಾನೆಗಳು, ಮಾವುತರು ಸುತ್ತುವರೆದಿದ್ದಾರೆ. ಮಾವುತರು, ಕಾವಾಡಿಗರ ಮಾಹಿತಿ ಆಧರಿಸಿ ವೈದ್ಯರ ತಂಡ ಕೂಡ ಬಂದಿತ್ತು.
ಈ ವೇಳೆ ಪಶುವೈದ್ಯ, ಶಾರ್ಪ್ಶೂಟರ್ ರಂಜನ್ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಒಂದು ಕಿ.ಮೀ. ಸಾಗಿದ್ದ ಮಕ್ನಾ ಆನೆ ನಂತರ ನಿತ್ರಾಣಗೊಂಡಿತ್ತು. ಬಳಿಕ ಮಕ್ನಾ ಆನೆಯನ್ನು ಸೆರೆ ಹಿಡಿದು ಅದಕ್ಕೆ ಚಿಕಿತ್ಸೆ ನೀಡಿ ಬಳಿಕ ಆನೆಯನ್ನು ಆನೆ ಬಿಡಾರಕ್ಕೆ ರವಾನೆ ಮಾಡಲಾಯಿತು.
ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆ ಬಿಡಾರಕ್ಕೆ ಮಕ್ನಾ ಆನೆಯನ್ನು ಶಿಫ್ಟ್ ಮಾಡಲಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.