ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಚಾಲಕನನ್ನು ಹಲಸೂರು ಗೇಟ್ ಸಂಚಾರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಘಟನೆಯಲ್ಲಿ ಮೃತ ಪಟ್ಟ ಇಬ್ಬರನ್ನು ಬಾಣಸವಾಡಿಯ ನಿವಾಸಿ ಪ್ರಶಾಂತ್ (25) ಮತ್ತು ಆಂಧ್ರಪ್ರದೇಶದ ಹಿಂದೂಪುರ ಮೂಲದ ಬಿಯಾನುಗರಿ ಶಿಲ್ಪಾ (23) ಎಂದು ಗುರುತಿಸಲಾಗಿದ್ದು, ಬಂಧಿತ ಚಾಲಕನನ್ನು ಶಿವಶಂಕರ್ ಎಂದು ಗುರ್ತಿಸಲಾಗಿದೆ. ಮೃತರಿಬ್ಬರು ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಶಿಲ್ಪಾ ಪಿಜಿನಲ್ಲಿ ವಾಸ ಮಾಡ್ತಿದ್ದರು. ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತ ಸಂಭವಿಸಿತ್ತು.
ಪ್ರಶಾಂತ್ ಮತ್ತು ಶಿಲ್ಪಾ ಮೆಜೆಸ್ಟಿಕ್‌ನಿಂದ ಕೆ.ಆರ್. ಸರ್ಕಲ್ ಕಡೆ ಬರುತ್ತಿದ್ದಾಗ ಭಾನುವಾರ ರಾತ್ರಿ 8.45ರ ಸುಮಾರಿಗೆ ಕಸದ ಲಾರಿ ಡಿಕ್ಕಿಯಾಗಿತ್ತು.. ಕೆಳಕ್ಕೆ ಬಿದ್ದ ಇಬ್ಬರ ಮೇಲೂ ವಾಹನದ ಚಕ್ರ ಹರಿದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು.
ಬೈಕ್‌ಗೆ ಡಿಕ್ಕಿ ಹೊಡೆದರೂ ಚಾಲಕ ಲಾರಿ ನಿಲ್ಲಿಸದೇ ಸುಮಾರು 10 ಮೀಟರ್‌ನಷ್ಟು ದೂರಕ್ಕೆ ಬೈಕ್ ಸವಾರರನ್ನ ಎಳೆದೊಯ್ದಿದ್ದ. ಇದರಿಂದ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಹರಿದಿದೆ. ಕೂಡಲೇ ಅವರನ್ನು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.
ಈ ನಡುವೆ ಘಟನೆ ಸಂಬಂಧ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪೊಲೀಸ್ ವರದಿ ಬಂಧ ಬಳಿಕ, ಚಾಲಕನ ತಪ್ಪಾಗಿದ್ದರೆ ಸಂತ್ರಸ್ತ ಕುಟುಂಬಕ್ಕೆ ಪಾಲಿಕೆ ಪರಿಹಾರ ನೀಡಲಿದೆ ಎಂದು ಭರವಸೆ ನೀಡಿದರು.