ಬೆಂಗಳೂರು: ಕರ್ನಾಟಕದಲ್ಲಿನ ಹದಗೆಟ್ಟ ಕಾನೂನು ಸುವ್ಯವಸ್ಥೆಯಿಂದಾಗಿ ಹೂಡಿಕೆದಾರರು ರಾಜ್ಯದಿಂದ ಹೊರಹೋಗುವಂತಾಗಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಆರೋಪ ನಿರಾಧಾರ. ಭಾರತಕ್ಕೆ ಬರುವ ಹೊಸ ಕಂಪನಿಗಳು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಅಥವಾ ಇತರ ಸ್ಥಳಗಳಲ್ಲಿ ಹೂಡಿಕೆ ಮಾಡುವ ಆಯ್ಕೆಗಳೊಂದಿಗೆ ಬರುತ್ತವೆ. ರಾಜ್ಯಕ್ಕೆ ಭೇಟಿ ನೀಡಿದಾಗ ತೆರಿಗೆ ರಚನೆ, ವಿದ್ಯುತ್ ಪರಿಸ್ಥಿತಿ, ಭೂಮಿಯ ಲಭ್ಯತೆ ಸೇರಿದಂತೆ ವಿವಿಧ ನಿಯತಾಂಕಗಳನ್ನು ನೋಡಿ ಹೂಡಿಕೆಗಳನ್ನು ನಿರ್ಧರಿಸುತ್ತವೆ. ಆದರೆ, ಈವರೆಗೂ ಕರ್ನಾಟಕಕ್ಕೆ ಬಂದ ನಂತರ ಯಾವ ಹೂಡಿಕೆದಾರರೂ ಹಿಂದೆ ಸರಿದಿಲ್ಲ ಎಂದು ಹೇಳಿದರು.
ಕರ್ನಾಟಕದ ವಿರುದ್ಧ ಕೇಂದ್ರ ನಾಯಕರು ಇಂತಹ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ಬೆಂಗಳೂರು ದೇಶದ ಪ್ರತಿಷ್ಠಿತ ನಗರ. ಬೆಂಗಳೂರನ್ನು ಕರ್ನಾಟಕಕ್ಕೆ ಸೀಮಿತ ಮಾಡಬಾರದು. ಇದನ್ನು ಪ್ರಪಂಚಕ್ಕೆ ತೋರಿಸಬೇಕಲ್ವಾ?. ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್ ಔಟ್ ಮಾಡಿ ಬಂದಿದ್ದಾರೆ. ನಾವು ಹೋಗಿ ವಾಕ್ ಔಟ್ ಮಾಡಬೇಕಿತ್ತಾ?. ರಾಜ್ಯ, ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕೆ ರಾಜ್ಯವನ್ನು ಚೆನ್ನಾಗಿ ನಡೆಸಿಕೊಳ್ಳಬೇಕಲ್ವಾ ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿರುವ ಕುರಿತು ಮಾತನಾಡಿ, ಇದು ಯುಪಿಎ ಎನ್‌ಡಿಎ ಅವಧಿ ಎನ್ನುವ ಹೋಲಿಕೆಯ ಪ್ರಶ್ನೆ ಅಲ್ಲ. ಅಂದಿನ ಬಜೆಟ್ ಎಷ್ಟಿತ್ತು, ಈಗ ಎಷ್ಟಾಗಿದೆ ಅನ್ನೋದನ್ನು ನೋಡಬೇಕು. ಚಂದ್ರಬಾಬು ನಾಯ್ಡುಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಕೊಡೋದು ಬೇಡ ಅನ್ನಲ್ಲ, ಸರಿ ಸಮಾನವಾಗಿ ಕೊಡಬೇಕು. ನಮ್ಮ ಪಾಲನ್ನು ನಮಗೆ ಕೊಡಿ ಎಂದು ಸುಪ್ರೀಂ ಕೋರ್ಟ್ವರೆಗೆ ತಲುಪಿದ್ದೇವೆ. ಕೊಟ್ಟಿದೀವಿ ಕೊಟ್ಟಿದೀವಿ ಅಂತಾರೆ, ಏನು ಕೊಟ್ಟಿದ್ದಾರೆ ಅಂತ ಹೇಳಬೇಕಲ್ವಾ?. ಭದ್ರಾ ಮೇಲ್ದಂಡೆ ಯೋಜನೆಗೆ ಹಣಕೊಡಬೇಕಿತ್ತು, ಕೊಟ್ಟಿಲ್ಲ. ಈ ರೀತಿ ಮಲತಾಯಿ ಧೋರಣೆ ತೋರಿಸಿ, ಬೆಂಗಳೂರಿಗೆ ಬಂದು ಎಲ್ಲಾ ಕೊಟ್ಟಿದ್ದಿವಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.