ಹೊಳೆನರಸೀಪುರ: ಹೊಳೆನರಸೀಪುರ ಶಾಸಕ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ಅವರು ಇಲ್ಲಿಯ ಎಸ್‌ಐಟಿ ವಿಚಾರಣೆಗೆ ಹಾಜರಾಗಿಲ್ಲ. ತನಿಖಾಧಿಕಾರಿ ಶ್ರೀಧರ್ ನೇತೃತ್ವದ ವಿಶೇಷ ತನಿಖಾ ತಂಡವು ಬೆಳಗ್ಗೆ 10 ಗಂಟೆಗೆ ಭವಾನಿ ನಿವಾಸಕ್ಕೆ ಆಗಮಿಸಿದ್ದು, 7 ಗಂಟೆಗಳ ಕಾಲ ಕಾದು ಸಂಜೆ 5 ಗಂಟೆಗೆ ಬೆಂಗಳೂರಿಗೆ ಮರಳಿದೆ.
ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಹಾಜರಾಗುವಂತೆ ಜೂನ್ 1ರಂದು ಹೊಳೆನರಸೀಪುರ ಪಟ್ಟಣದ ಮನೆಗೆ ಹಾಜರಾಗುವಂತೆ ಸಿಆರ್‌ಪಿಸಿಯ 41[ಎ] ಅಡಿಯಲ್ಲಿ ಭವಾನಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ವಿಚಾರಣೆ ಎದುರಿಸಲು ಸಿದ್ಧ ಎಂದು ಮೇ 15ರಂದು ಭವಾನಿ ರೇವಣ್ಣ ನೀಡಿದ ಉತ್ತರದ ಮೇರೆಗೆ ಎಸ್‌ಐಟಿ ತಂಡ ಭವಾನಿ ಮನೆಗೆ ಭೇಟಿ ನೀಡುತ್ತಿದೆ ಎಂದು ಎಸ್‌ಐಟಿ ತನ್ನ ನೋಟಿಸ್‌ನಲ್ಲಿ ತಿಳಿಸಿತ್ತು.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಅವರ ವಿಚಾರಣೆ ಅಗತ್ಯ ಎಂದು ಎಸ್‌ಐಟಿಯ ತನಿಖಾಧಿಕಾರಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ಎಸ್‌ಐಟಿ ತಂಡವು ಜೂನ್ 1ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ನಡುವೆ ಭವಾನಿ ನಿವಾಸಕ್ಕೆ ಭೇಟಿ ನೀಡಲಿದೆ ಎಂದು ನೋಟಿಸ್ ಸೇರಿಸಲಾಗಿತ್ತು. ಅಲ್ಲದೆ ಭೇಟಿಯ ವೇಳೆ ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಏಪ್ರಿಲ್ 29ರಂದು ಹೆಚ್.ಡಿ.ರೇವಣ್ಣ ಅವರನ್ನು ಬಂಧಿಸಿದ್ದು, ವಿಶೇಷ ನ್ಯಾಯಾಲಯ ಈ ಸಂಬಂಧ ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದನ್ನು ನೋಡಬಹುದಾಗಿದೆ. ಮೂರು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್‌ನನ್ನು ಎಸ್‌ಐಟಿ ಗುರುವಾರ ರಾತ್ರಿ ಬಂಧಿಸಿತ್ತು.
ಭವಾನಿ ರೇವಣ್ಣ ಹದಿನೈದು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎಸ್‌ಐಟಿ ಭವಾನಿ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸುವ ಸಾಧ್ಯತೆ ಇದೆ.