ಕಲಬುರಗಿ: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮತ ಎಣಿಕೆ ನಡೆಯುತ್ತಿದೆ. ಸಂಜೆ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.ಜೂನ್ 3 ರಂದು ಈ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮತಪತ್ರ ಬಳಕೆ ಮಾಡಿದ್ದು, ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಬೇಕಾಗಿರುವುದರಿಂದ ಫಲಿತಾಂಶ ವಿಳಂಬವಾಗಲಿದೆ.
ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಆರು, ಬಿಜೆಪಿಯ ನಾಲ್ಕು, ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 78 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ಇಂದು ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಮಹಾರಾಣಿ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಬೆಂಗಳೂರು ಪದವೀಧರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಗಳ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭಗೊಂಡಿದೆ.
ಮತಪೆಟ್ಟಿಗೆಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳನ್ನು ಚುನಾವಣಾ ಅಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಹಾಗೂ ಚುನಾವಣೆ ವೀಕ್ಷಕ ರವಿಶಂಕರ್ ಜೆ. ಅವರ ಸಮ್ಮುಖದಲ್ಲಿ ತೆರೆಯಲಾಯಿತು.
ಮತಪತ್ರಗಳನ್ನು ತಲಾ 25ರ ಬಂಡಲ್‌ಗಳನ್ನು ಮಾಡುವ ಕಾರ್ಯ ಮೊದಲಿಗೆ ನಡೆಯಲಿದೆ. ನಂತರ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪ್ರಾಶಸ್ತ್ಯದ ಮತದಾನ ಆಗಿರುವುದರಿಂದ ಎಣಿಕೆ ಕಾರ್ಯಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿದ್ದಾರೆ. ಮರಿತಿಬ್ಬೇಗೌಡ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, 5ನೇ ಬಾರಿ ಆಯ್ಕೆ ಬಯಸಿದ್ದಾರೆ. ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕೆ.ವಿವೇಕಾನಂದ ಇದೇ ಮೊದಲಿಗೆ ಸ್ಪರ್ಧಿಸಿದ್ದಾರೆ. ಇವರಲ್ಲದೇ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿ ಒಂಬತ್ತು ಮಂದಿ ಸ್ಪರ್ಧಿಸಿದ್ದಾರೆ.