ರಾಯಚೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಎಚ್ಚೆತ್ತ ರಾಯಚೂರು ಗ್ರಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿಕೆ ಬಿಡುಗಡೆ ಮಾಡಿ, ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಆರೋಪಿ ನಂ.8 ಅವರೊಂದಿಗೆ ಶಾಸಕ ದದ್ದಲ್ ವಾಟ್ಸ್ ಆಪ್ ಚಾಟಿಂಗ್ ಮಾಡಿದ್ದಾರೆ ಎಂದು ಮೂರು ಪುಟಗಳ ಹೇಳಿಕೆಯನ್ನು ಆರೋಪಿ ಪರ ವಕೀಲ ಪರಶುರಾಮ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದವರು ನಿಗಮದ ಅಧ್ಯಕ್ಷರಾಗಿರುವ ಬಸನಗೌಡ ದದ್ದಲ್ ಅವರ ಅನುಮತಿ ಇಲ್ಲದೇ ಇಷ್ಟೊಂದು ಹಣ ಹೇಗೆ ವರ್ಗಾವಣೆಯಾಗಲು ಸಾಧ್ಯ? ಸಚಿವ ನಾಗೇಂದ್ರ ಅವರೊಂದಿಗೆ ದದ್ದಲ್ ಅವರು ಕೂಡ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಸನಗೌಡ ದದ್ದಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಹಗರಣ ನಡೆದ ಅವಧಿ ಹಾಗೂ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 187 ಕೋಟಿ ಹಗರಣದ ತನಿಖೆಯಲ್ಲಿ ಎಸ್ಐಟಿ ಐವರನ್ನ ಬಂಧಿಸಿದೆ. ಸಿಬಿಐ ತನಿಖೆಯು ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಿಗಮದ ಹಣ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿದ್ದು, ಸಮುದಾಯದ ಅಭಿವೃದ್ಧಿಗೆ ಬಳಸಬೇಕು. ನಿಗಮದ ಹಣ ಯಾರೇ ಕಬಳಿಸಲು ಯತ್ನಿಸಿದ್ದರೂ ತನಿಖೆಯಲ್ಲಿ ಹೊರಬರುತ್ತದೆ. ಸರ್ಕಾರ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ವಿರೋಧ ಪಕ್ಷಗಳು ನನ್ನ ವಿರುದ್ದ ಮಾಡುವ ಆರೋಪಗಳಿಗೆ ಸಾಕ್ಷಿಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಲಿ. ಸಾಕ್ಷಿ ಕೊಟ್ಟರೆ ತನಿಖೆಗೆ ಅನುಕೂಲವಾಗುತ್ತದೆ. ಸತ್ಯಾಂಶ ಹೊರಬರುತ್ತದೆ. ವಿರೋಧ ಪಕ್ಷಗಳು ವೃತಾ ಆರೋಪ ಮಾಡುವುದನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.