ಕೊಡಗು: ಹಿಟ್ & ರನ್ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನೋರ್ವನನ್ನು ಮೈಸೂರಿನ ಬಾಲಕರ ವೀಕ್ಷಣಾ ಕೇಂದ್ರಕ್ಕೆ (ನಿಗಾ ಕೇಂದ್ರ) ರವಾನಿಸಲಾಗಿದೆ.
ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಟ್ & ರನ್ ಪ್ರಕರಣ ವರದಿಯಾಗಿತ್ತು. ಜೂ.1 ರಂದು ನಡೆದುಕೊಂಡು ಹೋಗುತ್ತಿದ್ದ ಜಯಪ್ಪ ಎಂಬ ಪಾದಚಾರಿಯೊಬ್ಬರಿಗೆ ವೇಗವಾಗಿ ಬಂದಿದ್ದ ದ್ವಿಚಕ್ರವಾಹನವೊಂದು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಘಟನೆ ನಡೆಯುತ್ತಿದ್ದಂತೆಯೇ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಜಯಪ್ಪ ಕುಟುಂಬ ಸದಸ್ಯರು ದೂರು ದಾಖಲಿಸಿ ಗಾಯಾಳುವನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿದ್ದರು. ಜೂ.02 ರಂದು ಜಯಪ್ಪ ಮೃತಪಟ್ಟಿದ್ದರು.
ತನಿಖೆ ನಡೆಸಿದ ಶನಿವಾರ ಸಂತೆ ಪೊಲೀಸರಿಗೆ ಅಪಘಾತಕ್ಕೆ ಕಾರಣವಾದ ವಾಹನ ಯಶೋಧ ಎಂಬುವವರಿಗೆ ಸೇರಿದ್ದೆಂದೂ ಅದನ್ನು ಯಶೋಧ ಅವರ ಅಪ್ರಾಪ್ತ ಪುತ್ರ ಚಾಲನೆ ಮಾಡುತ್ತಿದ್ದನೆಂದೂ ತಿಳಿದುಬಂದಿದೆ.
ಈ ಮಾಹಿತಿಯನ್ನು ಆಧರಿಸಿ ಯಶೋಧ ಆಕೆಯ ಪತಿ ಕುಶಾಲ ಅವರ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 304 (A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಪ್ರಾಪ್ತ ಬಾಲಕನನ್ನು ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈಗ ಅಪ್ರಾಪ್ತ ಬಾಲಕನನ್ನು 11 ದಿನಗಳ ಕಾಲ ನಿಗಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಸ್ಕೂಟರ್ ನ್ನು ವಶಕ್ಕೆ ಪಡೆಯಲಾಗಿದೆ.